ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಎರಡನೇ ವರ್ಷದ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಗುರುನಮನ ಕಾರ್ಯಕ್ರಮ ನಡೆಯಿತು. ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ಸಂಚಾಲಕ ವಾಮನ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿ ಶ್ರೀಗಳಿಗೆ ಹಾರಾರ್ಪಣೆಯೊಂದಿಗೆ ಶಾಲು ಹೊದಿಸಿ ಫಲತಾಂಬೂಲ ಸಮರ್ಪಿಸಿದರು.
ನಿವೃತ್ತ ಮುಖ್ಯ ಶಿಕ್ಷಕ, ಬರಹಗಾರ ಅಣಂಗೂರು ಬಾಲಕೃಷ್ಣ ಮಾಸ್ಟರ್ ಅವರಿಗೆ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿಯ ವತಿಯಿಂದ ಕೊಡಮಾಡುವ ಸಮಾಜ ಸೇವಾ ಪ್ರಶಸ್ತಿಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು. ಕಾಸರಗೋಡು ಜಿಲ್ಲಾ ಆರನೇ ಚುಟುಕು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ಚುಟುಕು ಸಾಹಿತಿ ವೆಂಕಟ ಭಟ್ ಎಡನೀರು ಅವರನ್ನು ಗ್ರಂಥಾಲಯ ಸಮಿತಿ ವತಿಯಿಂದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಾಲು ಹೊದಿಸಿ ಗೌರವಿಸಿದರು. ಪ್ರೊ. ಎ.ಶ್ರೀನಾಥ್, ರಾಧಾಕೃಷ್ಣ ಉಲಿಯತ್ತಡ್ಕ, ವಿಶಾಲಾಕ್ಷ ಪುತ್ರಕಳ, ಪತ್ರಕರ್ತ ಜಗನ್ನಾಥ್ ಪಿ.ಕೆ, ರಾಜೇಶ್ ಮಾಸ್ಟರ್, ಸಾಹಿತಿ ರವೀಂದ್ರನ್ ಪಾಡಿ ಉಪಸ್ಥಿತರಿದ್ದರು.