ಮಂಜೇಶ್ವರ: ವಿಶಿಷ್ಟ ಕಲಾ ನೈಪುಣ್ಯತೆಯ ಮೂಲಕ ಪರಂಪರಾಗದ ವೃತ್ತಿ ಸಂಬಂಧಿ ಕ್ಷೇತ್ರದಲ್ಲಿ ಗುರುತಿಸುವ ಅಕ್ಕ ಸಾಲಿಗರು ವರ್ತಮಾನದಲ್ಲಿ ಅನುಭವಿಸುತ್ತಿರುವ ಸಂಕಷ್ಟ-ಸವಾಲುಗಳ ಬಗ್ಗೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ವಿಧಾನಸಭೆಯಲ್ಲಿ ಮಾತನಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
ಕಣ್ಮನ ಸೆಳೆಯುವ ವಜ್ರ ವೈಢೂರ್ಯಕ್ಕೆ , ಚಿನ್ನ ಬೆಳ್ಳಿಗಳಿಗೆ ಚಿತ್ರ ಚಿತ್ತಾರದ ಹೊನಪು ನೀಡುವ ಅಕ್ಕ ಸಾಲಿಗರ ಬದುಕು ಇಂದು ಅತಂತ್ರತೆಡೆಗೆ ಸಾಗುತ್ತಿದೆ.ಈ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ ಮಂಜೇಶ್ವರದ ಶಾಸಕ ತನ್ನ ನಾಡಿನ ಅಕ್ಕಸಾಲಿಗ ವೃತ್ತಿಪರರ ಇತಿಹಾಸವನ್ನು ಅತ್ಯಂತ ಚೊಕ್ಕದಾಗಿ ದಾಖಲಿಸಿರುವ ಬಗ್ಗೆ ಸರ್ವತ್ರ ಅಭಿನಂದನೆ ಮೂಡಿ ಬರುತ್ತಿದೆ. ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶವಾದ ಮಂಜೇಶ್ವರ,ಉಪ್ಪಳ,ಅಡ್ಕತ್ತಬೈಲ್,ಕರಂದಕ್ಕಾಡು, ತಳಂಗರೆ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ತಮ್ಮಕುಲಕಸುಬಿನಲ್ಲಿ ತೊಡಗಿರುವ ಈ ಅಕ್ಕಸಾಲಿಗ ವೃತ್ತಿಗೆ ಚರಿತ್ರಾರ್ಹ ಹಿನ್ನಲೆಯಿದೆ. ಪೆÇೀರ್ಚುಗೀಸರು ಭಾರತಕ್ಕೆ ಕಾಲಿರಿಸಿದ ಕಾಲದಿಂದಲೇ ಮಂಜೇಶ್ವರ ಪ್ತದೇಶ ಕೇಂದ್ರೀಕರಿಸಿರುವ ಬಂಗ್ರಮಂಜೇಶ್ವರ ಬಂದರು ಅಂದು ವಜ್ರ ವೈಡೂರ್ಯ ಚಿನ್ಮ ಆಮದಿಗೆ ಹೆಸರುವಾಸಿಯಾದ ಸ್ಥಳವಾಗಿತ್ತು. ಅ ಕಾರಣದಿಂದಲೇ ಇಂದಿನ ಬಂಗ್ರಮಂಜೇಶ್ವರ ಅಂದು "ಬಂಗಾರ ಮಂಜೇಶ್ವರ" ಆಗಿ ಉಲ್ಲೇಖಿಸಲ್ಪಡುತ್ತಿತ್ತು.ಈ ಒಂದು ಪ್ರಮುಖ ಕಾರಣದಿಂದಲೇ ಇಂದಿಗೂ ಇಲ್ಲಿ ಅಕ್ಕ ಸಾಲಿಗ ಕುಟುಂಬಗಳು ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಿದೆ.
ಅಂದು ಬಂಗ್ರಮಂಜೇಶ್ವರದ ಹಲವು ಉತ್ಸವ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಚಿನ್ನಗಳನ್ನು ಸಂತೆಯಂತೆ ಮಾರಾಟ ಮಾಡುತ್ತಿದ್ದ ಕಾಲ ಇತ್ತೆಂದು ಇಲ್ಲಿನ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಇಂತಹ ಭವ್ಯ ಪರಂಪರೆಯ ಇರುವ ಅಕ್ಕಸಾಲಿಗ ವೃತ್ತಿ ನಿರತರಿಗೆ ಇಂದು ಬದುಕಿನ ಸೂಕ್ತ ಭದ್ರತೆ ಇಲ್ಲದ ಕಾರಣ ಚದುರಿ ಹೋಗಿದ್ದಾರೆ. ಇಂದಿನ ಕಾಪೆರ್Çೀರೇಟ್ ಕಂಪೆನಿಗಳು, ವೇತನ ಸಮಸ್ಯೆ,ಆದಾಯ ಕುಂಠಿತ, ಆಧುನಿಕ ತಂತ್ರಜ್ಞಾನಗಳ ಬಳಕೆಗಳಿಂದ ಪರಂಪರಾಗತ ಅಕ್ಕಸಾಲಿಗರ ಬದುಕು ಹೈರಾಣಗಿದೆ. ಜೀವನ ನಿರ್ವಹಣೆಗಾಗಿ ವೃತ್ತಿ ಪಲ್ಲಟತನ ನಡೆದರೂ ಇಂದಿಗೂ ಅದೇ ವೃತ್ತಿಯನ್ನು ಬದುಕಿನ ಆಧಾರ ಎಂಬಂತೆ ನಂಬಿರುವ ವಿಶ್ವಕರ್ಮ ಸಮುದಾಯದ (ಆಚಾರ್ಯ) ಜನಾಂಗಕ್ಕೆ ಅಕ್ಕಸಾಲಿಗ ವೃತ್ತಿಯ ತಕ್ಕುದಾದ ಸವಲತ್ತು ಅಹರ್ನಿಸಿ ಲಭಿಸಬೇಕಾದ ಅರ್ಹತೆಯಿದೆ ಎಂಬುದಾಗಿ ಶಾಸಕ ಎಕೆಎಮ್ ಆಶ್ರಫ್ ವಿಧಾನಸಭೆಯಲ್ಲಿ ವಿಷಯ ಮಂಡಿಸಿದ್ದಾರೆ.