ನವದೆಹಲಿ : ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳ ಅನುಕೂಲಕ್ಕಾಗಿ 'ಒಂದು ಬಾರಿ ನೋಂದಣಿ' (ಒಟಿಆರ್) ಪದ್ಧತಿ ಆರಂಭಿಸಿದೆ. ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಪ್ರತಿಬಾರಿಯೂ ತಮ್ಮ ಮೂಲ ಮಾಹಿತಿ ಭರ್ತಿ ಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.
ಮುಂದಿನ ದಿನಗಳಲ್ಲಿ ಯುಪಿಎಸ್‌ಸಿ ನಡೆಸಲಿರುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಯಸುವವರು 'ಒಟಿಆರ್' ಪದ್ಧತಿಯಡಿಯೇ ತಮ್ಮ ಮೂಲ ಮಾಹಿತಿ ದಾಖಲು ಮಾಡಬೇಕು. ಹೀಗೆ ದಾಖಲಿಸಿದ ಮಾಹಿತಿಯನ್ನು ಆಯೋಗದ ಸರ್ವರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.
'ಆಯೋಗ ನಡೆಸುವ ಪರೀಕ್ಷೆಗಳಿಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಒಟಿಆರ್ ಪದ್ಧತಿಯು ಅಭ್ಯರ್ಥಿಗಳ ಸಮಯ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲೂ ನೆರವಾಗಲಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಅಭ್ಯರ್ಥಿಯು ಯಾವುದಾದರೂ ಒಂದು ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಆತ ಅಥವಾ ಆಕೆಯ ಮೂಲ ಮಾಹಿತಿಯು ತನ್ನಂತಾನೆ ಅರ್ಜಿಯಲ್ಲಿ ನಮೂದಾಗುತ್ತದೆ. ಒಮ್ಮೊಮ್ಮೆ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ಕಣ್ತಪ್ಪಿನಿಂದಾಗಿ ತಪ್ಪು ಮಾಹಿತಿಯನ್ನು ಅದರಲ್ಲಿ ನಮೂದಿಸಿಬಿಡುವ ಸಾಧ್ಯತೆ ಇರುತ್ತದೆ. ಒಟಿಆರ್‌ನಿಂದ ಇಂತಹ ಪ್ರಮಾದಗಳಿಗೆ ಕಡಿವಾಣ ಹಾಕಬಹುದು' ಎಂದು ಆಯೋಗ ಹೇಳಿದೆ.
' ಆಯೋಗದ ವೆಬ್‌ಸೈಟ್‌ಗಳಾದ upsc.gov.in and upsconline.nic.in ತೆರೆದ ಕೂಡಲೇ ಒಟಿಆರ್‌ನ ಲಿಂಕ್ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ಕಿಸಿ ಅಭ್ಯರ್ಥಿಗಳು ತಮ್ಮ ಮಾಹಿತಿ ದಾಖಲಿಸಬಹುದು. ಒಟಿಆರ್ ಮೂಲಕ ಭರ್ತಿ ಮಾಡಿರುವ ಶೇ 70ರಷ್ಟು ಮಾಹಿತಿಯು ಆನ್‌ಲೈನ್ ಅರ್ಜಿಯಲ್ಲಿ ನಮೂದಾಗಿರುತ್ತದೆ' ಎಂದು ತಿಳಿಸಿದೆ.
'ಅಭ್ಯರ್ಥಿಗಳು ಒಟಿಆರ್‌ನಲ್ಲಿ ಬಹಳ ಎಚ್ಚರಿಕೆಯಿಂದ ಮಾಹಿತಿ ತುಂಬಬೇಕು. ಅಲ್ಲಿನ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಮಾಹಿತಿ ಭರ್ತಿ ಮಾಡಬೇಕು. ಆ ಮೂಲಕ ಮುಂದೆ ಯಾವುದೇ ಬಗೆಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು' ಎಂದೂ ಹೇಳಿದೆ.