ಸುಲ್ತಾನ್‌ಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಹೇಳಿದ್ದಾರೆ.
ಶುಕ್ರವಾರ ರಕ್ಷಾ ಬಂಧನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೈ ಅವರು, ಮುಂದಿನ ವರ್ಷ ಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಆಗ ಭವ್ಯ ಮಂದಿರದಲ್ಲಿ ಜನರು ರಾಮಲಲ್ಲಾನ ದರ್ಶನ ಪಡೆಯಬಹುದು ಎಂದು ತಿಳಿಸಿದರು.
"ಸುಲ್ತಾನ್‌ಪುರ ಅಯೋಧ್ಯೆಗೆ ಸಮೀಪದಲ್ಲಿರುವುದರಿಂದ, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಶ್ರೀರಾಮ ಲಲ್ಲಾನ 'ದರ್ಶನ' ಪಡೆಯಲು ನಾನು ಇಲ್ಲಿನ ಜನರಿಗೆ ಆಹ್ವಾನ ನೀಡುತ್ತಿದ್ದೇನೆ" ಎಂದು ಅವರು ಹೇಳಿದರು.
ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್‌ನಲ್ಲಿ ಭಕ್ತಾದಿಗಳ ದರ್ಶನಕ್ಕೆ ದೇವಾಲಯ ಸಿದ್ಧವಾಗಲಿದೆ ಎಂದು ರೈ ತಿಳಿಸಿದ್ದಾರೆ.
ನಿರ್ಮಾಣ ಕಾರ್ಯದಲ್ಲಿ ಕಬ್ಬಿಣವನ್ನು ಬಳಸುತ್ತಿಲ್ಲ ಎಂದು ಪ್ರತಿಪಾದಿಸಿದ ರೈ, ದೇವಾಲಯದ ವಿನ್ಯಾಸವು ಜನರು ಆಶ್ಚರ್ಯಚಕಿತರಾಗುವಂತಿದೆ ಎಂದಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ದೇವಾಲಯದ ನಿರ್ಮಾಣಕ್ಕಾಗಿ ಕೇಂದ್ರದಿಂದ ಸ್ಥಾಪಿಸಲ್ಪಟ್ಟ ಟ್ರಸ್ಟ್ ಆಗಿದೆ.