ಗುವಾಹಟಿ: ಮಣಿಪುರ(Manipur)ದ ಗುಡ್ಡಗಾಡು ಜಿಲ್ಲೆಗಳಿಗೆ ಹೆಚ್ಚಿನ ಸ್ವಾಯತ್ತತೆಗೆ ಸಂಬಂಧಿಸಿದ ಭಾರೀ ವಿವಾದಾತ್ಮಕ ಮಸೂದೆಗೆ ಎರಡು ಹೊಸ ತಿದ್ದುಪಡಿಗಳು ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಯು ಅನಿರ್ದಿಷ್ಟ ಆರ್ಥಿಕ ದಿಗ್ಬಂಧನವನ್ನು ವಿಧಿಸಿದೆ ಹಾಗೂ ಬಂದ್‌ಗಳು (ಸ್ಥಗಿತಗಳು) ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ರಾಜಧಾನಿ ಇಂಫಾಲ್‌ನಲ್ಲಿ ಶನಿವಾರ ಪೊಲೀಸರು ಪ್ರತಿಭಟನಾ ರ್ಯಾಲಿಯನ್ನು ತಡೆದಾಗ 30 ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಐವರು ಬುಡಕಟ್ಟು ವಿದ್ಯಾರ್ಥಿ ನಾಯಕರನ್ನು ಬಂಧಿಸಿ 15 ದಿನಗಳ ಕಾಲ ಜೈಲಿಗೆ ಕಳುಹಿಸಲಾಯಿತು.
ಮಣಿಪುರದಾದ್ಯಂತ ಐದು ದಿನಗಳ ಕಾಲ ಮೊಬೈಲ್ ಡೇಟಾ(mobile internet) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಶೇಷ ಕಾರ್ಯದರ್ಶಿ (ಗೃಹ) ಎಚ್. ಜ್ಞಾನ್ ಪ್ರಕಾಶ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ದ್ವೇಷದ ಭಾಷಣಗಳನ್ನು ಪ್ರಸಾರ ಮಾಡಲು ಕೆಲವು ಸಮಾಜ ವಿರೋಧಿಗಳು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ತಮ್ಮ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ಎಟಿಎಸ್‌ಯುಎಂ) ಹೆದ್ದಾರಿಗಳಲ್ಲಿ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ವಿಧಿಸಿದೆ. ವಾಹನಕ್ಕೆ ಬೆಂಕಿ ಹಚ್ಚುವುದು ಸೇರಿದಂತೆ ಕೆಲವು ಘಟನೆಗಳು ವರದಿಯಾಗಿವೆ.
ಗುಡ್ಡಗಾಡು ಪ್ರದೇಶಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವಂತೆ ಒತ್ತಾಯಿಸಿ ಇಂಫಾಲದಲ್ಲಿ ಪ್ರತಿಭಟನೆ ನಡೆಸಲಾಯಿತು.