ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣದ ವೇಳೆ ಕಳೆದ ಜನವರಿಯಲ್ಲಿ ಪಂಜಾಬ್‌ನಲ್ಲಿ ಸಂಭವಿಸಿದ್ದ ಭದ್ರತಾ ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿ ಅನ್ವಿತ್ ಹನ್ಸ್ ಅವರ ವೈಫಲ್ಯವೇ ಕಾರಣ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿದೆ.
ಭದ್ರತಾ ಲೋಪದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಮಿತಿ ರಚಿಸಿತ್ತು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೊತ್ರಾ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಪ್ರಧಾನ ಮಂತ್ರಿಗಳ ಭದ್ರತೆಗೆ ಸಂಬಂಧಿಸಿದ 'ಬ್ಲೂ ಬುಕ್' ಅನ್ನು ಕಾಲಕ್ಕನುಗುಣವಾಗಿ ಪರಿಷ್ಕರಿಸಲು ಮತ್ತು ನವೀಕರಿಸಲು ಮಾಡಲು ಮೇಲ್ವಿಚಾರಣಾ ಸಮಿತಿ ಇರಬೇಕು. ಪ್ರಧಾನ ಮಂತ್ರಿಗಳ ಭದ್ರತೆಗೆ ಸಂಬಂಧಿಸಿದ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಧಾನ ಮಂತ್ರಿಗಳು ರಾಜ್ಯ ಪ್ರವಾಸ ಕೈಗೊಳ್ಳುವಾಗ ಅವರ ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು 'ಬ್ಲೂ ಬುಕ್' ಒಳಗೊಂಡಿರುತ್ತದೆ. ಜತೆಗೆ, ರಾಜ್ಯದ ಅಧಿಕಾರಿಗಳು ಗಮನಿಸಬೇಕಾದ ಅಂಶಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ವಿವರಗಳನ್ನೂ ಹೊಂದಿರುತ್ತದೆ.
ಪ್ರಧಾನ ಮಂತ್ರಿಯವರು ಆ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದು ಪಂಜಾಬ್ ಎಡಿಜಿಪಿ ಜಿ. ನಾಗೇಶ್ವರ ರಾವ್ ಅವರು ಮಾಹಿತಿ ನೀಡಿದ ಬಳಿಕ ಎಸ್‌ಎಸ್‌ಪಿಯವರಿಗೆ ಸಾಕಷ್ಟು ಸಮಯಾವಕಾಶವಿತ್ತು. ಸಾಕಷ್ಟು ಸಿಬ್ಬಂದಿಯೂ ಇದ್ದರು. ಆದರೂ ಎಡಿಜಿಪಿ ಸೂಚನೆಯಂತೆ ಕ್ರಮ ಕೈಗೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಸಮಿತಿ ಹೇಳಿದೆ.
ಸಮಿತಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ ಜನವರಿಯಲ್ಲಿ, ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15-20 ನಿಮಿಷ ಸಿಲುಕಿದ್ದರು. ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡುವುದನ್ನು ವಿರೋಧಿಸಿದ ರೈತ ಸಂಘಟನೆಯು ರಸ್ತೆತಡೆ ನಡೆಸಿತ್ತು. ಹೀಗಾಗಿ, ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿ ಅವರು ವಾಪಸಾಗಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಭದ್ರತಾ ಲೋಪದ ತನಿಖೆಗೆ ಪಂಜಾಬ್ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ಸಮಿತಿ ರಚಿಸಿದ್ದವು. ಸುಪ್ರೀಂ ಕೋರ್ಟ್ ಸಹ ಸಮಿತಿ ರಚಿಸಿತ್ತು.