ಮಂಜೇಶ್ವರ: ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀ ಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಮಂಗಳವಾರ ಕ್ಷೇತ್ರ ಮುಂಭಾಗದ ನಾಗನ ಕಟ್ಟೆಯಲ್ಲಿ ಮುಂಜಾನೆಯಿಂದಲೇ ಶ್ರೀ ನಾಗದೇವರಿಗೆ ವಿವಿಧ ದ್ರವ್ಯಗಳಿಂದ ಅಭಿμÉೀಕ, ಪೂಜೆಗಳು ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ನೂರಾರು ಮಂದಿ ಊರ-ಪರವೂರ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು. ಕೋವಿಡ್ ಬಳಿಕ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಂಡ ನಾಗರ ಪಂಚಮಿಯಾದುದರಿಂದ ವಾಡಿಕೆಗಿಂತ ಹೆಚ್ಚೇ ಜನ ಸೇರಿದ್ದರು.
ಪ್ರಾಚೀನ ಹಿನ್ನೆಲೆಯ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ಸ್ವತಃ ನಾಗಸ್ವರೂಪನೇ ಆಗಿರುವುದರಿಂದ ನಾಗರ ಪಂಚಮಿ ಉತ್ಸವ ಇಲ್ಲಿ ಪ್ರಸಿದ್ದವಾಗಿದೆ.
ಮಂಗಳವಾರ ಮುಂಜಾನೆಯಿಂದಲೇ ಹಾಲು, ಎಳನೀರು ಅಭಿಷೇಕಗಳು ಶ್ರದ್ದಾ ಭಕ್ತಿಯಿಂದ ನೆರವೇರಿತು. ಮಧ್ಯಾಹ್ನದವರೆಗೂ ಭಕ್ತರ ಪ್ರವಾಹ ಹರಿದುಬಂತು.