ನವದೆಹಲಿ: ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ವಿತರಕರ ಒಕ್ಕೂಟದ ಉಪಾಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಸಂಘಟನೆಯ ವಿವಿಧ ಬೇಡಿಕೆಗಳ ಪರಿಹರಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿದರು.
ಜಂತರ್ ಮಂತರ್ ನಲ್ಲಿ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ಹಲವಾರು ಸದಸ್ಯರೊಂದಿಗೆ ಪ್ರಹ್ಲಾದ್ ಮೋದಿ ಬ್ಯಾನರ್ ಹಿಡಿದು ಘೋಷಣೆ ಕೂಗಿದರು.
ಪ್ರಸ್ತುತ ಜೀವನ ವೆಚ್ಚ ಪರಿಸ್ಥಿತಿಯೊಂದಿಗೆ ಅಂಗಡಿಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಕೇಂದ್ರ ಸರ್ಕಾರ ಪರಿಹಾರ ನೀಡುವಂತೆ ಮತ್ತು ಆರ್ಥಿಕ ಸಂಕಷ್ಟಗಳನ್ನು ಕೊನೆಗೊಳಿಸುವಂತೆ ನಾವು ಪ್ರಧಾನಿಗೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
ನಾಳೆ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಷನ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಫೆಡರೇಶನ್ ನಾಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ಯೋಜಿಸಿದೆ ಎಂದು ಎಐಎಫ್ ಪಿಎಸ್ ಡಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಸ್ವಾಂಭರ್ ಬಸು ತಿಳಿಸಿದ್ದಾರೆ.