ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾವು ದೇಶದೆಲ್ಲೆಡೆ 'ಅಗ್ನಿಪಥ' ಯೋಜನೆ ವಿರೋಧಿ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಭಾನುವಾರ ಚಾಲನೆ ನೀಡಲಾಗುತ್ತದೆ.
'ಯುನೈಟೆಡ್ ಫ್ರಂಟ್ ಆಫ್ ಎಕ್ಸ್-ಸರ್ವಿಸ್‌ಮೆನ್ ಹಾಗೂ ವಿವಿಧ ಯುವ ಸಂಘಟನೆಗಳ ಸಹಭಾಗಿತ್ವದಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.
ಇದರ ಮೊದಲ ಹೆಜ್ಜೆಯಾಗಿ ಆಗಸ್ಟ್ 7ರಿಂದ 14ರವರೆಗೆ 'ಜೈ ಜವಾನ್; ಜೈ ಕಿಸಾನ್' ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ' ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದ್ದಾರೆ.
'ಅಗ್ನಿಪಥ ಯೋಜನೆಯಿಂದ ಆಗಲಿರುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಶಾಂತಿಯುತವಾಗಿ ಅಭಿಯಾನ ನಡೆಸುವ ಮೂಲಕ ಯೋಜನೆ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದು ಅಭಿಯಾನದ ಉದ್ದೇಶ' ಎಂದಿದ್ದಾರೆ.
'ಅಭಿಯಾನದ ಅಂಗವಾಗಿ ಭಾನುವಾರ ಹರಿಯಾಣದ ಜಿಂದ್ ಜಿಲ್ಲೆ, ಉತ್ತರ ಪ್ರದೇಶದ ಮಥುರಾ ಮತ್ತು ಕೋಲ್ಕತ್ತದಲ್ಲಿ, ಆಗಸ್ಟ್ 9ರಂದು ಹರಿಯಾಣದ ರೇವಾಡಿ ಮತ್ತು ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ಆಗಸ್ಟ್ 10ರಂದು ಮಧ್ಯಪ್ರದೇಶದ ಇಂದೋರ್ ಮತ್ತು ಉತ್ತರ ಪ್ರದೇಶದ ಮೀರತ್‌ನಲ್ಲಿ ಹಾಗೂ ಆಗಸ್ಟ್ 11ರಂದು ಪಟ್ನಾದಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.