ಜಮ್ಮು: ಶಸ್ತ್ರಾಸ್ತ ಜಪ್ತಿ ಮಾಡಲು ಕರೆದುಕೊಂಡು ಹೋಗಿದ್ದಾಗ ಬಂಧಿತ ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರನೊಬ್ಬ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಪೊಲೀಸರು ಪ್ರತಿ ದಾಳಿ ಮಾಡಿ ಉಗ್ರ ಮೊಹದ್ ಅಲಿ ಹುಸೇನ್ ಅಲಿಯಾಸ್ ಕಾಸಿಮ್ ಎನ್ನುವನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಮೊಹದ್‌ನನ್ನು ಭಾರತ-ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆ ಬಳಿಯ ಅರಿನಾ ಸೆಕ್ಟರ್‌ನಲ್ಲಿ ಬಂಧಿಸಲಾಗಿತ್ತು. ಬುಧವಾರ ಆತನನ್ನು ಅದೇ ಪ್ರದೇಶದ ಬಳಿ ಶಸ್ತ್ರಾಸ್ತ್ರ ಜಪ್ತಿ ಮಾಡಲು ಪೊಲೀಸರು ಕರೆದುಕೊಂಡು ಹೋಗಿದ್ದರು.
ಈ ಸಂದರ್ಭದಲ್ಲಿ ಉದ್ರಿಕ್ತನಾಗಿದ್ದ ಮೊಹದ್ ಪೊಲೀಸರ ಬಳಿ ಇದ್ದ ರೈಫಲ್ ಕಸಿದುಕೊಂಡು ದಾಳಿ ಮಾಡಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪ್ರತಿದಾಳಿ ನಡೆಸಿ, ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಬಂಧಿತ ಉಗ್ರ ಎಲ್‌ಇಟಿಯ ಅಲ್ ಬದರ್ ಗುಂಪಿನ ಸದಸ್ಯನಾಗಿದ್ದ. ಭಾರತ ಗಡಿ ಬಳಿ ಡ್ರೋನ್ ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸುವಾಗ ಸಿಕ್ಕಿಬಿದ್ದಿದ್ದ ಎಂದು ಸಿಂಗ್ ತಿಳಿಸಿದ್ದಾರೆ.