ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆ ಕೆಲವು ವಾರಗಳ ಮಟ್ಟಿಗೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಗುರುವಾರ ಹೇಳಿವೆ.
ಇದೇ 28ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಚುನಾವಣೆಯ ದಿನಾಂಕ ನಿರ್ಧಾರವಾಗಲಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸೆಪ್ಟೆಂಬರ್ 21ರ ಒಳಗೆ ಚುನಾವಣೆ ಮುಕ್ತಾಯವಾಗುವ ನಿರೀಕ್ಷೆ ಇದ್ದು, ಅಧ್ಯಕ್ಷರ ಆಯ್ಕೆಯ ಪೂರ್ಣ ಪ್ರಕ್ರಿಯೆಗಳು ಅಕ್ಟೋಬರ್ ಅಥವಾ ನವೆಂಬರ್ ಒಳಗೆ ಅಂತಿಮಗೊಳ್ಳಲಿದೆ.
ಸೋನಿಯಾ ಗಾಂಧಿ ಅವರು ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರ ಜತೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹ ತೆರಳಿದ್ದಾರೆ. ಪಕ್ಷದ ನಾಯಕರು 'ಭಾರತ್ ಜೋಡೊ ಯಾತ್ರೆ'ಯ ಚಟುವಟಿಕೆಯಲ್ಲಿ ವ್ಯಸ್ತರಾಗಿರುವುದರಿಂದ ಚುನಾವಣೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಅವರು ವೈದ್ಯಕೀಯ ತಪಾಸಣೆಗಾಗಿ ಬುಧವಾರ ಸಂಜೆ ಲಂಡನ್‌ಗೆ ತೆರಳಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಹ ಸೋನಿಯಾ ಅವರ ಜತೆಗೆ ತೆರಳಿದ್ದರು. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದರು.