ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ತರುವಾಯ ಕಾರು ಚಾಲಕ, ಆಪ್ತ ಸಹಾಯಕ ಮತ್ತು ಮನೆಕೆಲಸದ ಸಿಬ್ಬಂದಿ ಸೇವೆ ಜೀವಿತಾವಧಿಯವರೆಗೂ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಶುಕ್ರವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ನಿವೃತ್ತಿ ನಂತರ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ನ್ಯಾಯಾಂಗ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ಆಗಸ್ಟ್ 23ರಂದು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಹಾಲಿ ಇರುವ ಎಲ್ಲ ನಿವೃತ್ತ ನ್ಯಾಯಮೂರ್ತಿಗಳಿಗೂ ಈ ಸೌಲಭ್ಯ ಸಿಗಲಿದೆ.
ನಿವೃತ್ತಿ ಸೌಲಭ್ಯ ಕುರಿತ ಹೊಸ ಪರಿಷ್ಕರಣೆ ಪ್ರಕಾರ, ನಿವೃತ್ತ ನ್ಯಾಯಮೂರ್ತಿಗಳಿಗೆ ದಿನದ 24 ಗಂಟೆಯೂ ಅವರ ನಿವಾಸ ಮತ್ತು ವೈಯಕ್ತಿಕವಾಗಿ ಭದ್ರತೆಯನ್ನು ನಿವೃತ್ತಿ ದಿನದಿಂದ ಐದು ವರ್ಷಗಳವರೆಗೂ ನೀಡಲಾಗುತ್ತದೆ.
ಒಂದು ವೇಳೆ, ಸದ್ಯ ಬೆದರಿಕೆ ಆಧರಿಸಿ 'ಹೆಚ್ಚಿನ ಭದ್ರತೆ' ಒದಗಿಸಿದ್ದಲ್ಲಿ, ಆ ವ್ಯವಸ್ಥೆಯೇ ಮುಂದುವರಿಯಲಿದೆ. ದೆಹಲಿಯಲ್ಲಿ ಆರು ತಿಂಗಳವರೆಗೂ 'ಟೈಪ್ 7' ಶ್ರೇಣಿಯ ಬಾಡಿಗೆ ರಹಿತ ವಸತಿಸೌಲಭ್ಯ ಸಿಗಲಿದೆ. ಸಾಮಾನ್ಯವಾಗಿ ಈ ಸೌಲಭ್ಯವನ್ನು ಕೇಂದ್ರದ ಮಾಜಿ ಸಚಿವರು, ಹಾಲಿ ಸಂಸದರಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ.