ಕೊಚ್ಚಿ : ಎರಡು ಪ್ರತ್ಯೇಕ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೊಯಿಕ್ಕೋಡ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಕೃಷ್ಣಕುಮಾರ್ ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯು ಆಡಳಿತಾತ್ಮಕ ಕ್ರಮ ಎಂದು ಕೇರಳ ಹೈಕೋರ್ಟ್ ಮಂಗಳವಾರ ನೀಡಿರುವ ವರ್ಗಾವಣೆ ಆದೇಶದಲ್ಲಿ ಹೇಳಿದೆ. ಇದೇ ವೇಳೆ ಇನ್ನೂ ಇಬ್ಬರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಎಸ್. ಕೃಷ್ಣಕುಮಾರ್ ಅವರ ಜಾಗಕ್ಕೆ ಮಂಜೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳಿ ಕೃಷ್ಣ ಎಸ್. ಅವರನ್ನು ನೇಮಿಸಲಾಗಿದೆ.
ಸಾಹಿತಿ, ಸಾಮಾಜಿಕ ಕಾರ್ಯಕರ್ತ ಚಂದ್ರನ್ ಅವರ ಮೇಲಿದ್ದ ಎರಡು ಲೈಂಗಿಕ ಕಿರುಕುಳ ಪ್ರಕರಣಗಳಲ್ಲೂ, ಚಂದ್ರನ್ ಅವರಿಗೆ ನ್ಯಾಯಾಧೀಶ ಕೃಷ್ಣಕುಮಾರ್ ಅವರು ನಿರೀಕ್ಷಣಾ ಜಾಮೀನು ನೀಡಿದ್ದರು. ಇದು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
ಆದೇಶಕ್ಕೆ ತಡೆ: ಮಹಿಳೆಯೇ ಲೈಂಗಿಕವಾಗಿ ಪ್ರಚೋದನಾಕಾರಿ ಬಟ್ಟೆ ತೊಟ್ಟಿದ್ದರು ಎಂದು ಹೇಳಿ, ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ. 'ಈ ಪ್ರಕರಣದಲ್ಲಿ ಈ ರೀತಿ ಹೇಳಿಕೆ ನೀಡುವ ಅಗತ್ಯ ಇರಲಿಲ್ಲ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೂ, ಚಂದ್ರನ್ ಅವರನ್ನು ಬಂಧಿಸಬಾರದು ಎಂದು ಹೈಕೋರ್ಟ್ ಹೇಳಿದೆ.
'ಮಹಿಳೆಯು ಲೈಂಗಿಕವಾಗಿ ಪ್ರಚೋದನಾಕಾರಿ ಆಗಿರುವ ಬಟ್ಟೆ ತೊಟ್ಟಿದ್ದಾರೆ ಎಂಬುದು ಆರೋಪಿಯ ಜೊತೆ ಆಕೆ ಇರುವ ಚಿತ್ರದಿಂದಲೇ ತಿಳಿಯುತ್ತಿದೆ. 74 ವರ್ಷದ, ಅಂಗವಿಕಲ ವ್ಯಕ್ತಿಯು ಒತ್ತಾಯಪೂರ್ವಕವಾಗಿ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಲು ಸಾಧ್ಯವಿಲ್ಲ' ಎಂದಿದ್ದರು.
ಮತ್ತೊಂದು ಪ್ರಕರಣವಾದ ಪರಿಶಿಷ್ಠ ಜಾತಿಯ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಚಂದ್ರನ್ ಅವರಿಗೆ ನೀಡಿರುವ ನಿರೀಕ್ಷಣಾ ಜಾಮೀನು ಆದೇಶವನ್ನು ತಡೆಹಿಡಿಯುವಂತೆ ಕೋರಿ ಕೇರಳ ಸರ್ಕಾರವು ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.
'ಆರೋಪಿಯು ಜಾತಿ ವ್ಯವಸ್ಥೆಯ ವಿರುದ್ಧ ಇದ್ದಾರೆ. ಮಹಿಳೆಯು ಪರಿಶಿಷ್ಠ ಜಾತಿಗೆ ಸೇರಿದ್ದಾರೆ ಎಂದು ತಿಳಿದಿದ್ದೂ ಆರೋಪಿಯು ಸಂತ್ರಸ್ಥೆಯ ದೇಹ ಮುಟ್ಟಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ' ಎಂದು ನ್ಯಾಯಾಧೀಶ ಕೃಷ್ಣಕುಮಾರ್ ಹೇಳಿದ್ದರು.