ಜನರು ನ್ಯಾಯಾಲಯದ ತೀರ್ಪುಗಳನ್ನು ಟೀಕಿಸಬಹುದು ಆದರೆ ನ್ಯಾಯಾಧೀಶರುಗಳನ್ನಲ್ಲ ಎಂದು ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಯು ಯು ಲಲಿತ್(Justice UU Lalit) ಹೇಳಿದ್ದಾರೆ.
ಅವರು ಆಗಸ್ಟ್ 27ರಂದು ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ಈಗಿನ ಸಿಜೆಐ ಎನ್ ವಿ ರಮಣ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
"ಒಬ್ಬ ನ್ಯಾಯಾಧೀಶ ತನ್ನ ತೀರ್ಪು ಮತ್ತು ಆದೇಶದ ಮೂಲಕ ಮಾತನಾಡುತ್ತಾನೆ ಎಂದು ನಾನು ದೃಢವಾಗಿ ನಂಬಿದ್ದೇನೆ, ಆದುದರಿಂದ ಅವರ ತೀರ್ಪನ್ನು ಕಾನೂನು ಪಂಡಿತರು ಅಥವಾ ಜನಸಾಮಾನ್ಯರು ಕೂಡ ವಿಮರ್ಶಿಸಬಹುದು ಅಥವಾ ಟೀಕಿಸಬಹುದು. ಆದರೆ ತೀರ್ಪನ್ನು ಟೀಕಿಸಬೇಕೇ ವಿನಹ ತೀರ್ಪಿನ ಹಿಂದಿರುವ ನ್ಯಾಯಾಧೀಶರನ್ನಲ್ಲ,'' ಎಂದು ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.