ನವದೆಹಲಿ: 'ಮತದಾರರಿಗೆ ಭರವಸೆಗಳನ್ನು ನೀಡದಂತೆ ರಾಜಕೀಯ ಪಕ್ಷಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಯಾವುದು ಸೂಕ್ತ ಭರವಸೆಯಾಗುತ್ತದೆ ಹಾಗೂ ಯಾವುದು ಉಚಿತ ಕೊಡುಗೆ ಎನಿಸುತ್ತದೆ ಎಂಬ ಬಗ್ಗೆ ಚರ್ಚೆ ಅಗತ್ಯ' ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ, ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ, 'ಈ ವಿಷಯ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಸಮರ್ಪಕವಾದ ಭರವಸೆಗಳು ಏನನ್ನು ಒಳಗೊಂಡಿರುತ್ತವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ' ಎಂದು ಹೇಳಿತು.
ಉಚಿತ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದ ಪಕ್ಷಗಳ ಮಾನ್ಯತೆ ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದಾರೆ.
ಸಾರ್ವತ್ರಿಕ ಆರೋಗ್ಯ ಸೇವೆ, ಕುಡಿಯುವ ನೀರು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಡುವುದಾಗಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ಉಚಿತ ಕೊಡುಗೆಗಳೆಂದು ಭಾವಿಸಬಹುದೇ ಎಂಬ ಬಗ್ಗೆ ಪರಾಮರ್ಶೆ ಅಗತ್ಯ ಎಂದೂ ನ್ಯಾಯಪೀಠ ಹೇಳಿತು.
' ಕೆಲವು ಯೋಜನೆಗಳಿಂದ ಜನರು ಗೌರವಯುತ ಜೀವನ ನಡೆಸಬಹುದಾಗಿದೆ. ಅಂಥ ಯೋಜನೆಗಳ ಲಾಭ ಪಡೆಯುವುದು ಸಹ ಜನರ ಹಕ್ಕುಗಳಾಗುತ್ತವೆ' ಎಂದು ನ್ಯಾಯಪೀಠ ಪ್ರತಿಪಾದಿಸಿತು.
'ನರೇಗಾದಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತದೆ. ಇಂಥ ಅನೇಕ ಯೋಜನೆಗಳಿದ್ದು, ಅವುಗಳಿಂದ ಜೀವನೋಪಾಯಕ್ಕೆ ಅನುಕೂಲವಾಗುತ್ತಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಕೇವಲ ಉಚಿತ ಕೊಡುಗೆಗಳೇ ಕಾರಣ ಎಂದು ನನಗೆ ಅನಿಸುತ್ತಿಲ್ಲ' ಎಂದು ಮುಖ್ಯನ್ಯಾಯಮೂರ್ತಿ ರಮಣ ಹೇಳಿದರು.
'ಕೆಲವರು ಭಾರಿ ಭರವಸೆಗಳನ್ನು ನೀಡಿಯೂ ಚುನಾವಣೆಯಲ್ಲಿ ಗೆದ್ದಿಲ್ಲ. ಹೀಗಾಗಿ, ಈ ವಿಷಯವಾಗಿ ಎಲ್ಲರೂ ಅಭಿಪ್ರಾಯಗಳನ್ನು ಸಲ್ಲಿಸಲಿ, ವಿಸ್ತೃತ ಚರ್ಚೆಯೂ ನಡೆಯಲಿ. ನಂತರವಷ್ಟೇ ನಾವು ಒಂದು ತೀರ್ಮಾನಕ್ಕೆ ಬರಲು ಸಾಧ್ಯ' ಎಂದೂ ಅವರು ಹೇಳಿದರು.ಅರ್ಜಿ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಲಾಯಿತು.