ಬೆಂಗಳೂರು: ಭವಿಷ್ಯದಲ್ಲಿ ಆರ್ಥಿಕತೆಗೆ ತಂತ್ರಜ್ಞಾನವು ದೊಡ್ಡ ಶಕ್ತಿಯಾಗಲಿದೆ. ಕೃತಕ ಬುದ್ದಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳನ್ನು ಇಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ICAI) ಅಧ್ಯಕ್ಷ ದೇಬಾಶಿಸ್ ಮಿತ್ರಾ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ನಡೆದ ಲೆಕ್ಕ ಪರಿಶೋಧಕರು(CA) ಎರಡು ದಿನ ಸಮ್ಮೇಳನ 'ಜ್ಞಾನ ಸಂಗಮ'ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಲೆಕ್ಕ ಪರಿಶೋಧನೆಯಲ್ಲಿ ತಂತ್ರಜ್ಞಾನವನ್ನು ಒಂದು ಭಾಗವಾಗಿ ಕಲಿಯಬೇಕು. ಬದುಕಿಗೆ ಅನಿವಾರ್ಯವಾಗಿದೆ ಎಂದರು.
ಡಿಜಿಟಲ್ ಪೂರ್ವ ಮತ್ತು ಡಿಜಿಟಲ್ ನಂತರದ ಅವಧಿಯಲ್ಲಿ ತಂತ್ರಜ್ಞಾನ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಇಂದು ಕೃತಕ ಬುದ್ಧಿಮತ್ತೆ(Artificial intelligence) ಮುಂಚೂಣಿ ಕ್ಷೇತ್ರವಾಗಿದೆ. ಸಮಾಜದಲ್ಲಿ ನಡೆಯುವ ವಂಚನೆ ಪತ್ತೆ, ತಂತ್ರಜ್ಞಾನದ ಅರಿವಿನಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
1947ರ ನಂತರ ಲೆಕ್ಕಪರಿಶೋಧಕರು ಸಲ್ಲಿಸಿದ ಪ್ರಬಂಧಗಳು ಸೇರಿ ಎಲ್ಲವನ್ನೂ ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಇದುವರೆಗೆ ಸುಮಾರು 3.5 ಕೋಟಿ ದಾಖಲೆಗಳು ಡಿಜಿಟಲೀಕರಣಗೊಂಡಿವೆ. ಹಿರಿಯ ಲೆಕ್ಕಪರಿಶೋಧಕರು ತಾವು ವಿದ್ಯಾರ್ಥಿಯಾಗಿದ್ದಾಗ ಸಲ್ಲಿಸಿದ್ದ ಪ್ರಬಂಧಗಳನ್ನು ಇಂದಿನ ಲೆಕ್ಕ ಪರಿಶೋಧಕರು ವೀಕ್ಷಿಸಿ ಅಧ್ಯಯನ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ದಕ್ಷಿಣ ಪ್ರಾದೇಶಿಕ ಲೆಕ್ಕಪರಿಶೋಧಕರ ಪರಿಷತ್ ಅಧ್ಯಕ್ಷ ಚಿನಾ ಮಸ್ತಾನ್ ತಲಕಾಯಲ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಲೆಕ್ಕ ಪರಿಶೋಧಕರ ಸಂಸ್ಥೆಯ ಅಧ್ಯಕ್ಷ ಟಿ ಶ್ರೀನಿವಾಸ್, ಪದಾಧಿಕಾರಿಗಳು ಹಾಜರಿದ್ದರು.
ಯಕ್ಷಗಾನ ಪ್ರದರ್ಶನ: ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರು ದಕ್ಷ ಯಜ್ಞ ಯಕ್ಷಗಾನ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೂರೆಗೊಂಡರು.