ಕುಂಬಳೆ: ಪುತ್ತಿಗೆ ಪಂಚಾಯಿತಿಯ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಫಿಸಿಕಲ್ ಸಯನ್ಸ್ ಕನ್ನಡ ಮಾಧ್ಯಮಕ್ಕೆ ನೇಮಕಗೊಂಡ ಮಲಯಾಳ ಶಿಕ್ಷಕನನ್ನು ವಿದ್ಯಾರ್ಥಿಗಳು ಹಾಗೂ ಹೆತ್ತವರು ಶುಕ್ರವಾರ ಆಲೆಗೆ ಪ್ರವೇಶಿಸದಂತೆ ತಡೆಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕ ಪೊಲೀಸ್ ಸಂರಕ್ಷಣೆಯಲ್ಲಿ ಆಗಮಿಸಿದರೂ, ಹೆತ್ತವರು ಹಾಗೂ ವಿದ್ಯಾರ್ಥಿಗಳು ತಮ್ಮ ಪಟ್ಟುಬಿಡದೆ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಆದೇಶದನ್ವಯ ಮಲಯಾಳಿ ಶಿಕ್ಷಕ ಶುಕ್ರವಾರ ಬೆಳಗ್ಗೆ ಶಾಲೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಇವರ ಹೆತ್ತವರು ತಮ್ಮ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಇದನ್ನು ಲೆಕ್ಕಿಸದೆ ಶಿಕ್ಷಕ ಶಾಲೆ ಕಚೇರಿಗೆ ತೆರಳಲು ಶ್ರಮಿಸುತ್ತಿದ್ದಂತೆ ಆಕ್ರೋಶಗೊಡ ವಿದ್ಯಾರ್ಥಿಗಳು ಹಾಗೂ ಹೆತ್ತವರು ಬಲವಂತವಾಗಿ ಈತನನ್ನು ತಡೆದಿದ್ದಾರೆ. ಪ್ರತಿಭಟನೆ ಪ್ರಬಲಗೊಳ್ಳುತ್ತಿದ್ದಂತೆ ಈ ಶಿಕ್ಷಕ ಬಸ್ಸನ್ನೇರಿ ಅಲ್ಪ ದೂರ ಸಂಚರಿಸಿ, ಈತನ ಸಹಚರನೊಂದಿಗೆ ಆಗಮಿಸಿ ಮತ್ತೆ ಶಾಲೆಗೆ ಆಗಮಿಸಿದ್ದರೂ, ಪ್ರತಿಭಟನಾಕಾರರು ಹಿಂದೇಟು ಹಾಕದೆ ತೀವ್ರವಾಗಿ ಪ್ರತಿಭಟಿಸಿದ್ದಾರೆ. ನಂತರ ಪೊಲೀಸ್ ಕಾವಲಿನೊಂದಿಗೆ ಆಗಮಿಸಿದರೂ, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರ ಮಧ್ಯೆ ಈ ಶಿಕ್ಷಕನ ಆಟ ನಡೆಯಲಿಲ್ಲ. ಈ ಮಧ್ಯೆ ತನಗೆ ಶಾಲೆಗೆ ಸೇರ್ಪಡೆಗೆ ಅವಕಾಶಮಾಡಿಕೊಡದೆ, ತನ್ನ ಮೇಲೆ ಹಲ್ಲೆ ನಡೆಸಿ ಕಳುಹಿಸಲಾಗಿದೆ ಎಂದು ಈ ಶಿಕ್ಷಕ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.
ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕನನ್ನು ನೇಮಿಸುವ ಮೂಲಕ ಅಂಗಡಿಮೊಗರು ಶಾಲೆಯ ಶಾಂತಿಯ ವಾತಾವರಣವನ್ನು ಕೆಡಿಸಲಾಗಿದೆ. ತಕ್ಷಣ ಈ ಶಿಕ್ಷಕನನ್ನು ಕನ್ನಡ ಮಾಧ್ಯಮದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಬಶೀರ್ ಕೊಟ್ಟೂಡಲ್ ತಿಳಿಸಿದ್ದಾರೆ.
ಪೊಲೀಸ್ ಸಂರಕ್ಷಣೆಯೊಂದಿಗೆ ಶಾಲೆಗೆ ಆಗಮಿಸಿದ ಮಲಯಾಳಿ ಶಿಕ್ಷಕ: ಒಳಪ್ರವೇಶಿಸಲು ಬಿಡದೆ ತಡೆಗಟ್ಟಿದ ವಿದ್ಯಾರ್ಥಿಗಳು, ಹೆತ್ತವರು: ಅಂಗಡಿಮೊಗರಲ್ಲಿ ಮುಗಿಲುಮುಟ್ಟಿದ ಆಕ್ರೋಶ
0
ಆಗಸ್ಟ್ 27, 2022