ನವದೆಹಲಿ: ಇದಾಗಲೇ ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಇದಾಗಲೇ ಹಲವರು ತಮ್ಮ ಸಾಮಾಜಿಕ ಜಾಲತಾಣದ ಡಿಪಿಗಳನ್ನು ಬದಲಿಸಿಕೊಂಡಿದ್ದಾರೆ.
ಭಾರತದ ತ್ರಿವರ್ಣ ಧ್ವಜ ಇರುವ ಚಿತ್ರವನ್ನು ಹಲವರು ಹಾಕಿಕೊಂಡಿದ್ದರೆ, ಇದನ್ನೇ ಸ್ವಲ್ಪ ಬದಲಿಸಿ ಅದರೊಂದಿಗೆ ತಮ್ಮ ಚಿತ್ರವನ್ನೂ ಸೇರಿಸಿ ಇನ್ನು ಕೆಲವರು ಡಿಪಿ ಹಾಕಿಕೊಂಡಿದ್ದು, ತಮ್ಮದೇ ಆದ ರೀತಿಯಲ್ಲಿ ದೇಶಭಕ್ತಿ ಮೆರೆದಿದ್ದಾರೆ.
ಈಗ ಎಲ್ಲೆಲ್ಲೂ 'ಹರ್ ಘರ್ ತಿರಂಗಾ' ವಾಕ್ಯ ಮೊಳಗುತ್ತಿದೆ. ಇದರ ನಡುವೆಯೇ ಇದೀಗ ಹರ್ ಘರ್ ತಿರಂಗಾ ಆಯಂಥಮ್ ಸಾಂಗ್ ಬಿಡುಗಡೆ ಆಗಿದೆ. ಬಹುತೇಕ ನಟರು, ಕ್ರಿಕೆಟ್ ತಾರೆಯರು, ಕ್ರೀಡಾಪಟುಗಳು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿಯೂ ಹಾಡು ಕೇಳಿಬಂದಿದ್ದು, ಕ್ರಿಕೆಟಿಗ ಕೆ.ಎಲ್.ರಾಹುಲ್ ಇದನ್ನು ಹೇಳಿದ್ದಾರೆ.
ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ, ಭಾರತದ ಬಹುತೇಕ ಎಲ್ಲಾ ಭಾಷೆಗಳನ್ನು ಈ ಹಾಡಿನಲ್ಲಿ ನಾವು ಕೇಳಬಹುದಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಅಜಯ್ ದೇವಗನ್, ಕೀರ್ತಿ ಸುರೇಶ್, ಅನುಷ್ಕಾ ಶರ್ಮಾ, ಪಿ.ವಿ ಸಿಂಧು ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ದೇಶಭಕ್ತಿಯನ್ನು ಹೊಮ್ಮಿಸುವ ಈ ಹಾಡನ್ನೂ ನೀವೂ ಕೇಳಿ ಆನಂದಿಸಿ…