ಇಂದು ವಡಾಪಾವ್ ದಿನ. ವಡಾಪಾವ್ ಯಾರಿಗೆ ತಾನೆ ಗೊತ್ತಿಲ್ಲಾ, ಬನ್ ಮಧ್ಯ ಆಲೂಗಡ್ಡೆ ಬೋಂಡಾ ಇಟ್ಟು ಅದಕ್ಕೆ ಒಂದು ಕರಿದ ಹಸಿ ಮೆಣಸು ಇಟ್ಟು ಕೊಡುವ ವಡಾಪಾವ್ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಜೀವನದ ಆಧಾರ.
ವಡಾಪಾವ್ ಮೂಲತಃ ಮುಂಬೈನ ಸ್ನ್ಯಾಕ್ಸ್ ಆದರೂ ಕರ್ನಾಟಕದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಬೆಂಗಳೂರಿಗರು ವಡಾಪಾವ್ ಇಷ್ಟಪಟ್ಟು ತಿನ್ನುತ್ತಾರೆ. ಅದರೆ ಮುಂಬೈಯಲ್ಲಿ ಕೆಲವರಿಗೆ ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್ ಎಲ್ಲವೂ ವಡಾಪಾವ್ ಆಗಿರುತ್ತೆ. ಕೆಲವು ಕಡೆ 10 ರುಪಾಯಿ ಇನ್ನು ಕೆಲವು ಕಡೆ 20 ರುಪಾಯಿಗೆ (ರಸ್ತೆ ಬದಿಯಲ್ಲಿ) ವಡಾಪಾವ್ ಸಿಗುವುದು, ಜೇಬಿನಲ್ಲಿ ರೆಸ್ಟೋರೆಂಟ್ ಹೋಗಿ ತಿನ್ನಲು ದುಡ್ಡು ಇಲ್ಲದಿದ್ದರೆ 10-10 ರುಪಾಯಿಯಲ್ಲಿ ಆರಾಮವಾಗಿ ಹೊಟ್ಟೆ ತುಂಬಿಕೊಳ್ಳಬಹುದು. ಅದುವೇ ವಡಾಪಾವ್ ಸ್ಪೆಷಾಲಿಟಿ.
ವಡಾಪಾವ್ ಕುರಿತ ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ:
ವಡಾಪಾವ್ ಆಮದು ಸ್ನಾಕ್ಸ್
* ವಡಾಪಾವ್ ಮುಂಬೈನ ಪ್ರಸಿದ್ಧ ಸ್ನಾಕ್ಸ್ ಆದರೂ ಇದು ವಿದೇಶಿ ಆಮದು ಸ್ನಾಕ್ಸ್ ಆಗಿದೆ. ಈ ಸ್ನಾಕ್ಸ್ ಅನ್ನು ಭಾರತಕ್ಕೆ ಮೊದಲು ತಂದವರು ಪೋರ್ಚುಗೀಸರು.
* ಶಿವ ಸೇನಾವು ಉಡುಪಿ ಜಾಯಿಂಟ್‌ಗೆ ಪರ್ಯಾಯವಾಗಿ ಮಹಾರಾಷ್ಟ್ರೀಯನ್ನರಿಗೆ ನೀಡಲು ವಡಾಪಾವ್ ಒಪ್ಪಿಕೊಂಡಿತ್ತು ಎಂದು ಮುಂಬೈನ ಪ್ರಸಿದ್ಧ ಫುಡ್ ಬ್ಲಾಗರ್ ಮೆಹರ್ ಮಿರ್ಜಾ ಹೇಳಿಕೊಂಡಿದ್ದಾರೆ. ಶಿವಸೇನಾ ಕ್ಯಾಂಪೇನ್ ಸಮಯದಲ್ಲಿ ಕರ್ನಾಟಕದ ಉಡುಪಿಯ ಅನೇಕರು ಹೋಗಿ ಅಲ್ಲಿ ದಕ್ಷಿಣ ಭಾರತದ ಹೋಟೆಲ್ ತೆಗೆದಿದ್ದರು. ಜನರಿಗೆ ಹೊರಗಡೆ ನಿಂತು ಬೇಗನೆ ತಿಂದು ಹೋಗಲು ಅನುಕೂಲವಾಗಲು ಈ ವಡಾಪಾವ್ ಅಂಗಡಿಗಳನ್ನು ತೆರೆಯಲಾಯಿತು. ಅದೀಗ ಮುಂಬೈನ ಸ್ನಾಕ್ಸ್ ಆಗಿ ಗುರುತಿಸಿಕೊಂಡಿದೆ.
ವಡಾಪಾವ್ ಮೊದಲು ಕಂಡು ಹಿಡಿದವರು ಅಶೋಕ್ ವಾಡಿಯಾ
* ವಡಾಪಾವ್ ಮೊದಲು ಪ್ರಾರಂಭಿಸಿದ ಕ್ರೆಡಿಟ್ ಅಶೋಕ್ ವಾಡಿಯಾ ಎಂಬವವರಿಗೆ ಸಲ್ಲುತ್ತೆ. 1960ರಲ್ಲಿ ಬಾಲಾಸಾಹೇಬ್ ಠಾಕ್ರೆ ಹೇಗೆ ದಕ್ಷಿಣ ಭಾರತ ಉಡುಪಿಯವರು ಹೋಟೆಲ್‌ಗಳನ್ನು ಸ್ಥಾಪಿಸಿ ಉದ್ಯಮಿಗಳಾಗುತ್ತಿದ್ದಾರೋ ಹಾಗೆಯೇ ಮಹಾರಾಷ್ಟ್ರಿಯನ್ನರಿಗೆ ಆಗುವುಂತೆ ಹೇಳುತ್ತಾರೆ. ಇದರಿಂದ ಸ್ಪೂರ್ತಿ ಪಡೆದ ವಾಡಿಯಾ 1966ರಲ್ಲಿ ದಾದರ್‌ಸ್ಟೇಷನ್‌ನಲ್ಲಿ ವಡಾಪಾವ್ ಸ್ಟಾಲ್ ಹಾಕುತ್ತಾರೆ.
ಅವರ ಸ್ಟಾಲ್‌ಗೆ ತುಂಬಾ ದಿನಗೂಲಿ ನೌಕರರು ಬಂದು ಬನ್ ಹಾಗೂ ಅವಲಕ್ಕಿ ತಿಂದು ಹೋಗುತ್ತಿದ್ದರು. ಒಮ್ಮೆ ಬನ್ ಮಧ್ಯ ಆಲೂಗಡ್ಡೆಯಿಂದ ಮಾಡಿದ ಪಾವ್ ಹಾಕಿ ಅದಕ್ಕೆ ಸ್ವಲ್ಪ ಚಟ್ನಿ ಹಾಕುತ್ತಾರೆ, ಅದು ತಿನ್ನಲು ತುಂಬಾನೇ ರುಚಿಯಾಗಿರುತ್ತೆ, ಅಲ್ಲಿಂದ ವಡಾಪಾವ್ ಪ್ರಸಿದ್ಧಿಯನ್ನು ಪಡೆಯಲಾರಂಭಿಸುತ್ತೆ.
ವಡಾಪಾನ್ ಫ್ಯಾನ್ ಆಗಿದ್ದ ಬಾಲಾ ಸಾಹೇಬ್ ಠಾಕ್ರೆ
1970-80ರ ನಡುವೆ ಮಹಾರಾಷ್ಟ್ರದಲ್ಲಿ ತುಂಬಾ ಕಾರ್ಮಿಕ ಹೋರಾಟಗಳು ನಡೆಯುತ್ತೆ, ಅನೇಕ ಬಟ್ಟೆ ಮಿಲ್‌ಗಳು ಮುಚ್ಚಿ ಹೋಗುತ್ತವೆ, ಅದರ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು ವಡಾಪಾವ್ ಸ್ಟಾಲ್ ಇಟ್ಟರು.
* ಬಾಲಾ ಸಾಹೇಬ್ ಠಾಕ್ರೆ ಅವರು ವಾಡಿಯಾ ಅವರ ವಡಾಪಾವ್‌ನ ದೊಡ್ಡ ಫ್ಯಾನ್ ಆಗಿದ್ದರು. ಪ್ರತಿದಿನ ವಡಾಪಾವ್ ತಿನ್ನಲು ಬರುತ್ತಿದ್ದರು.
* 1990ರಲ್ಲಿ ಅಮೆರಿಕದ ಮೆಕ್‌ಡೊನಾಲ್ಡ್ ಭಾರತದಕ್ಕೆ ಬಂತು. ಮೆಕ್‌ಡೊನಾಲ್ಡ್ ಬರ್ಗರ್ ಬಂದ್ರೂ ಜನವರಿಗೆ ವಡಾಪಾವ್ ಮೇಲಿರುವ ಪ್ರೀತಿ ಕಡಿಮೆಯಾಗಲಿಲ್ಲ.
* ವಡಾಪಾವ್ ಅನ್ನು ಬಡವ -ಬಲ್ಲಿದ ಎಂಬ ಬೇಧವಿಲ್ಲದೆ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ, ಅದೂ ಚಿಕ್ಕ-ಚಿಕ್ಕ ಸ್ಟಾಲ್‌ಗಳಿಂದ ಸೆಲೆಬ್ರಿಟಿಗಳು ಖರೀದಿ ಮಾಡಿ ತಿನ್ನುತ್ತಾರೆ.
ಅಶೋಕ್ ವಾಡಿಯಾರ ವಡಾಪಾವ್ ರುಚಿ ಈಗಲೂ ಮುಂದುವರೆದಿದೆ
* ಅಶೋಕ್ ವಾಡಿಯಾ 55ನೇ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಆಗ ಅವರ ದೊಡ್ಡ ಮಗ ಎಂಬಿಎ ಓದುತ್ತಿರುತ್ತಾರೆ, ಆಗ ಎರಡನೇ ಮಗ ಕಾಮರ್ಸ್ ಓದುತ್ತಿರುತ್ತಾರೆ, ತಂದೆ ಮರಣವಾದ ಬಳಿಕ ಸ್ವಲ್ಪ ಸಮಯ ಅಂಗಡಿ ನಡೆಸಿಕೊಂಡು ಹೋಗೋಣ ಅಂತ ಬರುತ್ತಾರೆ. ಆದರೆ ಇದೀಗ ವಾಡಿಯಾ ಮರೆಯಗಿ 25 ವರ್ಷಗಳೇ ಕಳೆದರೂ ಅವರ ಮಗ ನರೇಂದ್ರ ಈಗಲೂ ಮುಂಬೈನಲ್ಲಿ ವಡಾಪಾವ್ ಮಾರಾಟ ಮಾಡುತ್ತಿದ್ದಾರೆ, ವಡಾಪಾವ್ ಮಾರಾಟಗಾರರಲ್ಲಿ ನಂ. 1 ಸ್ಥಾನದಲ್ಲಿದ್ದಾರೆ.