ಹೈದರಾಬಾದ್: ಆಂಧ್ರ ಪ್ರದೇಶ ಮಾಜಿ ಸಿಎಂ ಮತ್ತು ಖ್ಯಾತ ತೆಲುಗು ನಟ ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರ ಪುತ್ರಿ ಉಮಾ ಮಹೇಶ್ವರಿ ಅವರು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎನ್ ಟಿಆರ್ ಅವರ ನಾಲ್ಕನೇ ಪುತ್ರಿ ಸೋಮವಾರ ಮಧ್ಯಾಹ್ನ ಹೈದರಾಬಾದ್‌ನ ಜುಬಿಲಿ ಹಿಲ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಟಿಡಿಪಿ ಮುಖ್ಯಸ್ಥ ಹಾಗೂ ಎನ್ ಟಿಆರ್ ಅವರ ಹಿರಿಯ ಅಳಿಯ ಚಂದ್ರಬಾಬು ನಾಯ್ಡು ತಮ್ಮ ಪತ್ನಿ ನಾರಾ ಭುವನೇಶ್ವರಿ ಅವರ ಜೊತೆಗೂಡಿ ಉಮಾಮಹೇಶ್ವರಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಪ್ರಸ್ತುತ ಉಮಾ ಮಹೇಶ್ವರಿ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸೆಕ್ಷನ್ 174 CrPC (ಆತ್ಮಹತ್ಯೆ) ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿದೇಶದಲ್ಲಿ ನೆಲೆಸಿರುವ ನಂದಮೂರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅವರು ಭಾರತಕ್ಕೆ ಆಗಮಿಸಿದ ಬಳಿಕ ಅಂತಿಮ ವಿಧಿ ವಿಧಾನ ನಡೆಸಲಾಗತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಎನ್.ಟಿ.ಆರ್ ಮತ್ತು ಬಸವತಾರಕ ದಂಪತಿಯ ನಾಲ್ವರು ಪುತ್ರಿಯರಲ್ಲಿ ಉಮಾ ಮಹೇಶ್ವರಿ ಕೊನೆಯವರು. ಅವರಿಗೆ ಎರಡು ಬಾರಿ ವಿವಾಹವಾಗಿತ್ತು. ಅವರ ಮೊದಲ ಪತಿ ನರೇಂದ್ರರಾಜನ್ , ಎರಡನೇ ಪತಿ ಕಂಟಮನೇನಿ ಶ್ರೀನಿವಾಸ್ ಪ್ರಸಾದ್. ಇತ್ತೀಚೆಗೆ ಉಮಾ ಮಹೇಶ್ವರಿ ಅವರ ಮಗಳ ಮದುವೆಯಾಗಿತ್ತು.