ನವದೆಹಲಿ: ಭಾರತದ ಇತಿಹಾಸದಲ್ಲಿ ದೇಶ ವಿಭಜನೆಯ ಅಮಾನವೀಯ ಅಧ್ಯಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಸಾವು, ನೋವು ಅನುಭವಿಸಿದ್ದ ಲಕ್ಷಾಂತರ ಜನರಿಗೆ ನಮನ ಸಲ್ಲಿಸಿರುವ ಅಮಿತ್ ಶಾ, ಭಾರತದ ಇತಿಹಾಸದಲ್ಲಿ ದೇಶ ವಿಭಜನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೇಶ ವಿಭಜನೆಯ ಭಯಾನಕ ನೆನಪಿನ ದಿನವು ಯುವ ಪೀಳಿಗೆಗೆ ದೇಶವಾಸಿಗಳು ಅನುಭವಿಸಿದ್ದ ಹಿಂಸೆ ಹಾಗೂ ನೋವನ್ನು ನೆನಪಿಸಲಿದೆ. ಅಲ್ಲದೆ ಶಾಶ್ವತವಾಗಿ ಶಾಂತಿ ಕಾಪಾಡಿಕೊಂಡು ಸೌಹಾರ್ದತೆಯಿಂದ ಬದುಕಲು ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ.
ಹಿಂಸಾಚಾರ ಹಾಗೂ ದ್ವೇಷದಿಂದಾಗಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದರು. ಅಸಂಖ್ಯಾತ ಜನರು ಸ್ಥಳಾಂತರಗೊಂಡಿದ್ದರು ಎಂದು ಅಮಿತ್ ಶಾ ಹೇಳಿದರು.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ದೇಶ ವಿಭಜನೆ ವೇಳೆ ಜನರ ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು 'ದೇಶ ವಿಭಜನೆಯ ಭಯಾನಕ ನೆನಪಿನ ದಿನ' ಎಂದು ಘೋಷಿಸಿದ್ದರು.