ಮಥುರಾ: ಇಲ್ಲಿನ ವೃಂದಾವನದ ಬಾಂಕೆ ಬಿಹಾರಿ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲು ಸಂಭವಿಸಿ ಶನಿವಾರ ಮುಂಜಾನೆ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಮಂಗಳಾರತಿ' ವೇಳೆ ಮಂದಿರದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಜನದಟ್ಟಣೆ ಹೆಚ್ಚಾಗಿ ನೂಕುನುಗ್ಗಲು ಸಂಭವಿಸಿದ್ದರಿಂದ ಉಸಿರುಗಟ್ಟಿ ಇಬ್ಬರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ತಿಳಿಸಿದ್ದಾರೆ.
ನೋಯ್ಡಾದ 55 ವರ್ಷ ವಯಸ್ಸಿನ ಮಹಿಳೆ ಹಾಗೂ ಜಬಲ್‌ಪುರದ 65 ವರ್ಷ ವಯಸ್ಸಿನ ಪುರುಷ ಮೃತಪಟ್ಟವರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಗ್ರಾ ಕಮಿಷನರ್ ಅಮಿತ್ ಗುಪ್ತಾ ಸ್ಥಳಕ್ಕೆ ತೆರಳಿದ್ದು, ಘಟನೆಗೆ ಕಾರಣವೇನೆಂದು ಪರಿಶೀಲನೆ ನಡೆಸಲಿದ್ದಾರೆ ಹಾಗೂ ಸ್ಥಳೀಯಾಡಳಿತಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಚಾಹಲ್ ಹೇಳಿದ್ದಾರೆ.
'ಮಂಗಳಾರತಿ' ವೇಳೆ ಘಟನೆ ಸಂಭವಿಸಿದೆ. ಆಡಳಿತವು ಸಮಯೋಚಿತವಾಗಿ ಮಧ್ಯೆ ಪ್ರವೇಶಿಸಿದ್ದರಿಂದ ಅನೇಕರ ಜೀವ ಉಳಿದಿದೆ ಎಂದು ಮಂದಿರದ ಅರ್ಚಕ ಶಶಾಂಕ್ ಗೋಸ್ವಾಮಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ನೆರವಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಬ್ಬಗಳ ವೇಳೆ ಧಾರ್ಮಿಕ ಪ್ರದೇಶಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.