ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು. ಲಲಿತ್ ಅವರು ಸೋಮವಾರ ತಮ್ಮ ಮೊದಲ ದಿನದ ಕಾರ್ಯಾರಂಭಿಸಿ, 'ಉನ್ನತ ನ್ಯಾಯಾಲಯದಲ್ಲಿ ಅರ್ಜಿಗಳ ವಿಚಾರಣೆಯ ಪಟ್ಟಿಗೆ ಹೊಸ ಕಾರ್ಯವಿಧಾನ ಶೀಘ್ರವೇ ಆರಂಭಿಸಲಾಗುವುದು' ಎಂದು ಹೇಳಿದರು.
'ಗುರುವಾರದ ಹೊತ್ತಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿಯವರೆಗೆ, ನಾವು ತುರ್ತು ಅರ್ಜಿಗಳನ್ನು ಪಟ್ಟಿ ಮಾಡಲಿದ್ದು, ರಿಜಿಸ್ಟ್ರಾರ್ ಮುಂದೆ ಅರ್ಜಿಗಳನ್ನು ಪ್ರಸ್ತಾಪಿಸುವ ಮೂಲ ಪದ್ಧತಿಗೆ ಹಿಂತಿರುಗುತ್ತೇವೆ' ಎಂದು ತಿಳಿಸಿದರು.
ತುರ್ತು ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಮೊದಲು ನ್ಯಾಯಾಲಯಕ್ಕೆ ಮನವಿ ಮಾಡುವುದಕ್ಕಿಂತ, ರಿಜಿಸ್ಟ್ರಾರ್ ಮುಂದೆ ತುರ್ತು ವಿಚಾರಣೆ ಪ್ರಕರಣಗಳನ್ನು ಉಲ್ಲೇಖಿಸುವಂತೆ ಅವರು ವಕೀಲರಿಗೆ ಸೂಚಿಸಿದರು.
ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ದಿನದ ಕಲಾಪಗಳನ್ನು ಪ್ರಾರಂಭಿಸಿದಾಗ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಲಲಿತ್ ಅವರಿಗೆ ಸ್ವಾಗತ ಕೋರಿ, ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಹಿರಿಯ ವಕೀಲ ದುಷ್ಯಂತ್ ದವೆ ಅವರು ವಕೀಲರ ಸಮೂಹದ ಪರವಾಗಿ ಶುಭಾಶಯ ಹೇಳಿದರು.
ಸಿಜೆಐ ಲಲಿತ್ ಅವರು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠದ ಮುಂದೆ 62 ಅರ್ಜಿಗಳು ವಿಚಾರಣೆಗೆ ಬಂದವು. ಇದರಲ್ಲಿ ಹತ್ತು ಸಾರ್ವಜನಿಕ ಅರ್ಜಿಗಳು ಇದ್ದವು.
ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳೊಂದಿಗೆ 60 ಪಿಐಎಲ್‌ಗಳು ಸೇರಿ 900ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.