ನವದೆಹಲಿ : ಲಡಾಖ್‍ನಲ್ಲಿ ಚೀನಾವು ತಾನು 2020 ರಿಂದ ಆಕ್ರಮಿಸಿಕೊಂಡಿರುವ ಭಾರತೀಯ ಭೂಭಾಗವೆಂದು ಹೇಳಲಾದ ಡೆಪ್ಸಾಂಗ್ ಪ್ಲೇನ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಹೆಚ್ಚುವರಿ ಕಾಂಕ್ರೀಟ್ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದೆ ಹಾಗೂ ಇವುಗಳ ಮೇಲೆ ಸೀಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಮಾಧ್ಯಮವೊಂದು ಮೂಲಗಳನ್ನಾಧರಿಸಿ ವರದಿ ಮಾಡಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪದ ವಿವಾದಿತ ಸ್ಥಳಗಳಲ್ಲಿ ಚೀನಾದ ಸೇನೆ ತನ್ನ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದೂ ತಿಳಿದು ಬಂದಿದೆ ಎಂದು ವರದಿಯೊಂದು ಹೇಳಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಕಾರ್ಯನಿರ್ವಹಿಸುವ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಮೂಲಗಳ ಪ್ರಕಾರ ಭಾರತೀಯ ಸೇನಾ ನಿಯೋಜನೆಯ ಮೇಲೆ ಕಣ್ಣಿಡಲು ಚೀನಾ ಈ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದೆ.
ಮೇ 2020ರಿಂದ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವೆ ಸಂಘರ್ಷಕ್ಕೆ ಕಾರಣವಾದ ಸ್ಥಳಗಳಲ್ಲಿ ಈ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ.
ದಿ ಟೆಲಿಗ್ರಾಫ್ ವರದಿಯೊಂದರ ಪ್ರಕಾರ ಮೇ 2020 ರಿಂದೀಚೆಗೆ ಪೂರ್ವ ಲಡಾಖ್‍ನಲ್ಲಿ ಭಾರತ ತನ್ನ ಭೂಭಾಗವೆಂದು ಹೇಳುವ 1000 ಚದರ ಕಿಮೀ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಿದೆ.
ಇತ್ತೀಚಿಗಿನ ಗುಪ್ತಚರ ವರದಿಯೊಂದರ ಪ್ರಕಾರ ಚೀನಾವು ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ತಾನು ಆಕ್ರಮಿಸಿರುವ ಸ್ಥಳಗಳಲ್ಲಿ ಹೊಸ ಬಂಕರ್‍ಗಳನ್ನೂ ನಿರ್ಮಿಸಿದೆ.
"ನಾವು ನಿಗಾ ಇಟ್ಟಿದ್ದೇವೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪದ ಭಾರತದ ಭೂಭಾಗದಲ್ಲಿ ಚೀನಾ ಸೇನೆ ನಡೆಸುತ್ತಿರುವ ನಿರ್ಮಾಣ ಚಟುವಟಿಕೆಗಳು ಗಡಿ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ರಕ್ಷಣಾ ಸಚಿವಾಲಯದ ಮೂಲವೊಂದು ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.