ನವದೆಹಲಿ:ದೆಹಲಿ ಹಾಗೂ ಕೊಲ್ಕತ್ತಾ ವಿಶ್ವದ ಅತ್ಯಂತ ಮಲಿನ ನಗರಗಳು ಎಂಬ ಕುಖ್ಯಾತಿಗೆ ಪಾತ್ರವಾಗಿವೆ.
ಹೆಲ್ತ್ ಎಫೆಕ್ಟ್ಸ್ ಇನ್‍ಸ್ಟಿಟ್ಯೂಟ್, ಜಾಗತಿಕ ವಾಯು ಉಪಕ್ರಮದ ಸ್ಥಿತಿಗತಿ ಕುರಿತಂತೆ ಇತ್ತೀಚೆಗೆ ಬಿಡುಗಡೆ ಮಾಡಿದ "ಏರ್ ಪೊಲ್ಯೂಶನ್ ಅಂಡ್ ಹೆಲ್ತ್ ಇನ್ ಸಿಟೀಸ್" (Air Pollution and Health in Cities) ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಮುಂಬೈ 14ನೇ ಸ್ಥಾನದಲ್ಲಿದ್ದರೆ ಭಾರತದ ಇತರ ಯಾವುದೇ ನಗರಗಳು ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಪಿಎಂ 2.5 ಮಾಲಿನ್ಯಕಾರಕ ಕಣಗಳಿಂದ ಅತಿಹೆಚ್ಚು ರೋಗ ಎದುರಿಸುತ್ತಿರುವ ಬೀಜಿಂಗ್ ನಗರದಲ್ಲಿ ಪ್ರತಿ ಲಕ್ಷ ಜನರ ಪೈಕಿ 124 ಮಂದಿ ಈ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಒಂದು ಲಕ್ಷಕ್ಕೆ 106 ಮಂದಿ ಮಾಲಿನ್ಯಕ್ಕೆ ಬಲಿಯಾಗುತ್ತಿದ್ದು, ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ. 99 ಮಂದಿ ಜೀವ ಕಳೆದುಕೊಳ್ಳುತ್ತಿರುವ ಕೊಲ್ಕತ್ತಾ ಎಂಟನೇ ಸ್ಥಾನದಲ್ಲಿದೆ. ಅಗ್ರ 20ರ ಪಟ್ಟಿಯಲ್ಲಿ ಚೀನಾದ ಐದು ನಗರಗಳು ಸೇರಿವೆ.
ಅಧ್ಯಯನದಲ್ಲಿ ಒಟ್ಟು ಏಳು ನಗರಗಳನ್ನು ಸೇರಿಸಲಾಗಿದ್ದು, ಅತಿಹೆಚ್ಚು ಜನಸಂಖ್ಯೆ ಇರುವ ಆರು ವಲಯಗಳ 103 ನಗರಗಳನ್ನು ಮಾತ್ರ ರ‍್ಯಾಂಕಿಂಗ್ ಪರಿಗಣಿಸಲಾಗಿದೆ. ಸಾರಜನಕದ ಡೈಆಕ್ಸೈಡ್ ಅತಿಯಾಗಿರುವ ಅಂಶದ ಆಧಾರದಲ್ಲಿ ಶಾಂಘೈ ನಗರ ಅಗ್ರಸ್ಥಾನದಲ್ಲಿದೆ. ಭಾರತದ ಯಾವುದೇ ನಗರ ಅಗ್ರ 20ರ ಪಟ್ಟಿಯಲ್ಲಿಲ್ಲ.
ವಿಶ್ವದ ಬಹುತೇಕ ನಗರಗಳು ಪಿಎಂ 2.5 ಹಾಗೂ ಎನ್‍ಓ2 ಮಾನದಂಡಗಳ ಆಧಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತ ಅಧಿಕ ಮಾಲಿನ್ಯಕಾರಕ ಕಣಗಳನ್ನು ಹೊಂದಿವೆ. 2019ರಲ್ಲಿ ದೆಹಲಿಯಲ್ಲಿ ಪಿಎಂ 2.5 ಪ್ರಮಾಣ ಪ್ರತಿ ಘನ ಮೀಟರ್‍ಗೆ 110 ಮೈಕ್ರೊಗ್ರಾಂ ಆಗಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರಮಾಣವಾಗಿರುವ 5 ಮೈಕ್ರೊಗ್ರಾಂಗೆ ಹೋಲಿಸಿದರೆ 22 ಪಟ್ಟು ಅಧಿಕ. ಕೊಲ್ಕತ್ತಾದಲ್ಲಿ ಈ ಪ್ರಮಾಣ ಘನ ಮೀಟರ್‍ಗೆ 84 ಮೈಕ್ರೊಗ್ರಾಂ ಆಗಿದೆ ಎಂದು hindustantimes.com ವರದಿ ಮಾಡಿದೆ.