ಡಾ.
ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಮರ್ಥ ಸಂಯೋಜನೆ ಮತ್ತು ಪ್ರಾಯೋಜಕತ್ವದಲ್ಲಿ
ಶ್ರೀಮದೆಡನೀರು ಮಠದಲ್ಲಿ ಚಾತುರ್ಮಾಸ್ಯ ದ ಅಂಗವಾಗಿ ನಡೆಯುವ ಶ್ರೀಕೃಷ್ಣ ಚರಿತಮ್
ತಾಳಮದ್ದಳೆ ಸಪ್ತಾಹ ತಾಳಮದ್ದಳೆ ಸಪ್ತಾಹಗಳ ಸಾಲಿನಲ್ಲೇ ಅನೇಕ ವೈಶಿಷ್ಟ್ಯಗಳಿಂದ
ಮಹತ್ವದ್ದೆನಿಸಿದೆ, ಭಿನ್ನತೆ ಕಾಯ್ದು ಗತಕಾಲದ ಕ್ಲಾಸಿಕ್ ದಿನಗಳನ್ನು ಮೆಲುಕಿಸಿದೆ.
ತಾಳಮದ್ದಳೆ ಎಂದರೆ ಮಾತು ಕುಣಿಯುವ ಕಲೆ.
ಪದ
ಒಡೆದು ಅರ್ಥ ಸೃಜಿಸುವ ಕಲೆ. ಅದು ಭಾಷೆಯ ಬಯಲಾಟ. ಅಲ್ಲಿ ಭಾಷೆಯೇ ಕುಣಿಯಬೇಕು.
ಅದರೊಳಗೆ ವಿಚಾರ ಪೋಣಿಸಬೇಕು. ಈ ಔಚಿತ್ಯದ ಅರಿವಿನಲ್ಲಿ ಮೂಡುವ ಪ್ರಸ್ತುತಿಯಲ್ಲಿ ಅದರ
ಯಶಸ್ಸು.
ಆದರೆ ಇತ್ತೀಚೆಗೆ ತಾಳಮದ್ದಳೆಯಲ್ಲಿ ಒಂದೇ ರೀತಿಯ
ಮಾತುಕತೆ, ಬಯಲಾಟ ಶೈಲಿಯ ಮಾತಿನ ವೇಗ, ಓಘ, ಆಕ್ರಮಣೋತ್ಸಾಹ ಇತ್ಯಾದಿಗಳ ನಡುವಿನಿಂದಲೇ
ನಿಧಾನಕ್ಕೆ ರಸಾಧಾರಿತವಾಗಿ ಮಾತಿನ ಮೊಳೆಗಳನ್ನು ಚುಚ್ಚುತ್ತಲೇ ಗಗನಚುಂಬಿ ಕಟ್ಟಡವೊಂದು
ಎದ್ದುನಿಂತಂತೆ ಪ್ರಸಂಗ ನೇಯುವುದುಂಟಲ್ಲ ಅದು ಕಲೆಗಾರಿಕೆ. ಇಂಥ ವಾಕ್ಚಮತ್ಕ್ರತಿಯ
ರಸಪೋಷಿತ ಕಲೆಗಾರಿಕೆಯಿಂದ ಕಳೆಗಟ್ಟಿದ ಅಪೂರ್ವ ತಾಳಮದ್ದಳೆ ಜುಲೈ 31ರಂದು ಎಡನೀರು
ಮಠದಲ್ಲಿ ನಡೆಯಿತು. ನಿಜಕ್ಕೂ ಮುಂಜಾನೆಯ ನಸುಗತ್ತಲಿಗೆ ಹೂವೊಂದು ಪಕಳೆ ಬಿಚ್ಚಿ
ಮೆಲ್ಲಮೆಲ್ಲನೆ ಕಿರಣಕ್ಕೆ ಬಾಯ್ತೆರೆದು ಅರಳುವ ರೀತಿ ಈ ಆಖ್ಯಾನ ಅದರ ವಾಚಿಕ ಶೈಲಿಯ
ಭಿನ್ನತೆಯಿಂದ ಅರಳಿದೆ. ಕಾವ್ಯದಂತೆ ಅರ್ಥ ಸ್ಫುರಿಸಿದೆ.
ಪ್ರಸಂಗ :*ಸುಭದ್ರಾ ಕಲ್ಯಾಣ*
ಇದರಲ್ಲಿ
ಶ್ರೀಕೃಷ್ಣ ನಾಗಿ ಹಿರಿಯ ಅರ್ಥದಾರಿ, ಕವಿ, ಲೇಖಕ ಡಾ. ರಮಾನಂದ ಬನಾರಿ, ಅರ್ಜುನ
ಸನ್ಯಾಸಿಯಾಗಿ ವೇದ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ, ಬಲರಾಮನಾಗಿ ಚಿಂತಕ,
ವಿದ್ವಾಂಸ ಡಾ.ಪ್ರಭಾಕರ ಜೋಷಿ, ವನಪಾಲಕನಾಗಿ ಸುರೇಶ ಕುದ್ರೆಂತಾಯ, ಸುಭದ್ರೆಯಾಗಿ ಹರೀಶ
ಬಳಂತಿಮೊಗರು.
ಹಿಮ್ಮೇಳದಲ್ಲಿ ಯುವ ಭಾಗವತ ಚಿನ್ಮಯ ಕಲ್ಲಡ್ಕರ
ಭಾವಪ್ರಚೋದಕ ಹಾಡುಗಾರಿಕೆ ಅದಕ್ಕೆ ಚೆಂಡೆ-ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು
ಕೃಷ್ಣಪ್ರಕಾಶ್ ಉಳಿತ್ತಾಯರ ಸಾಥ್ ಒಟ್ಟಂದದ ತಾಳಮದ್ದಳೆಯನ್ನು ಇಂಪಾಗಿಸಿತು. ಇಂಥ
ಹಿಮ್ಮೇಳದ ಬಲದಿಂದ
ಕಲಾವಿದರು ವಾಚಿಕದಲ್ಲಿ ದೃಶ್ಯಕಟ್ಟುತ್ತ ನಡೆದ ದಾರಿ ಪ್ರೇಕ್ಷಕ ಮತ್ತು ವೀಕ್ಷಕರಿಗೆ ಭಾಷೆ, ಭಾವದ ಹೊಸಪಾಕ,
ರುಚಿಯನ್ನುಣಿಸಿತು.
ಇವರದ್ದು
ವಾಚಿಕದ ಹಳೆಯ ಕ್ರಮ. ಗತಕಾಲದ ತಾಳಮದ್ದಳೆಯ ಒಂದು ಸಣ್ಣ ಮಾದರಿ. ಚುಟುಕಾದ ಮಾತು. ಆದರೆ
ಧ್ವನಿಪೂರ್ಣ. ಅದು ಮನೋಭಿತ್ತಿಗೆ ರಸವುಣಿಸುತ್ತಲೇ ಚಿತ್ತಕ್ಕೆ ಚಿಂತನೆ ನೀಡಿದೆ.
ಭಾಷೆಯಿಂದ ಭಾವೋಲ್ಲಾಸ ಮೂಡಿಸಿದೆ. ಹೊಸ ಅರಿವುಗಳನ್ನು ಚೆಲ್ಲಿದೆ.
ಪ್ರಸಂಗದ
ನಡೆ, ಪಾತ್ರಗಳ ನಡೆ, ಅರ್ಥದಾರಿಗಳ ಸ್ವಸ್ಥಾನಪ್ರಜ್ಞೆಯಿಂದ ಎಲ್ಲೂ ಆತಿರೇಕಗಳಿಲ್ಲದೇ,
ಸಂಭಾಷಣೆಯನ್ನು ನಾಟಕೀಯವಾಗಿ ಪೋಣಿಸುತ್ತ ಪ್ರದರ್ಶನವನ್ನು ದರ್ಶನವಾಗಿಸಿದ ಪರಿ ಭಲೇ...
ಗ್ರೇಟ್ ಎಂಬುದು ಪ್ರೇಕ್ಷಕ, ವೀಕ್ಷಕರ ಭಾವ.
ವಿಶೇಷವಾಗಿ
ಭಾಷೆಯ ಬಾಗು, ಬಳುಕುವಿಕೆಯನ್ನು ದುಡಿಸಿಕೊಂಡ ರೀತಿಯೇ ಈ ತಾಳಮದ್ದಳೆಯ ಹೈಲೈಟ್. ಎಳೆಯ
ತಲೆಮಾರಿನ ಕಲಾವಿದರಿಗೆ ಮತ್ತು ಪ್ರೇಕ್ಷಕರ ಪಾಲಿಗೆ ಇಂಥ ಕೂಟಗಳು ಅಪರೂಪದ ರಸದೂಟ.
ಒಂದು
ಪ್ರಸಂಗ ಗೆಲ್ಲುವುದು ಸಮತೂಕದ ಕಲಾವಿದರಿಂದ. ಅಂಥ ಕಲಾವಿದರನ್ನು ಸಂಯೋಜಿಸಿದ ಮತ್ತು
ಸಪ್ತಾಹ ಪ್ರಾಯೋಜಿಸಿದ ಡಾ. ಕೀಲಾರು ಪ್ರತಿಷ್ಠಾನ ಅಭಿನಂದನಾರ್ಹರು.
- *ಎಂ. ನಾ. ಚಂಬಲ್ತಿಮಾರ್*