ಉಪ್ಪಳ: ಸದ್ಗುರು ಶ್ರೀ ನಿತ್ಯಾನಂದವಿದ್ಯಾಪೀಠ ಕೊಂಡೆವೂರಿನಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಮಂಜೇಶ್ವರ ಶೈಕ್ಷಣಿಕ ಉಪಜಿಲ್ಲಾಮಟ್ಟದ ಶಾಲಾವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಒಟ್ಟು 19 ಶಾಲೆಗಳಿಂದ 259 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ದೀಪಪ್ರಜ್ವಲನೆ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಯೋಗಾನಂದಸರಸ್ವತೀ ಸ್ವಾಮಿಗಳು ಆಶೀರ್ವಚನವನ್ನಿತ್ತರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಕೆ. ಎನ್. ಪಿಳ್ಳೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಶಿಧರ ಶೆಟ್ಟಿ ಗ್ರಾಮ ಚಾವಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ, ರಾಜ್ಯಪುರಸ್ಕಾರ ವಿಜೇತೆ ಶಾರದಾ ಟೀಚರ್ ಅವರಿಗೆ ಗುರುವಂದನಾಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕಸಂಘದ ಅಧ್ಯಕ್ಷ ತಾರಾನಾಥ ಶುಭಾಶಂಸನೆಗೈದರು. ಶಾಲಾ ಪ್ರಾಂಶುಪಾಲ ಪ್ರವಿಧ್ ಸ್ವಾಗತಿಸಿ, ಶಾಲಾ ಆಡಳಿತ ಸಮಿತಿಯ ಜೊತೆಕಾರ್ಯದರ್ಶಿ ಚಂದ್ರಹಾಸ ವಂದಿಸಿದರು.
ಸುಸಜ್ಜಿತವಾದ ಐದು ವೇದಿಕೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಸಮಾರೋಪ ಸಮಾರಂಭ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಜಯಶೀಲಾ ಸ್ವಾಗತಿಸಿದರು. ಶಾಲಾ ಮಾತೃಸಮಿತಿಯ ಅಧ್ಯಕ್ಷೆ ಆಶಾಪ್ರಕಾಶ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಬಹುಮಾನ ವಿತರಿಸಿದರು. ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಪಿ. ಆರ್. ಶೆಟ್ಟಿ ಹಾಗೂ ಶಿಶುವಾಟಿಕಾ ಮಾತೃಸಮಿತಿಯ ಅಧ್ಯಕ್ಷೆ ಆಶ್ರಿತಾ ಶೆಟ್ಟಿ ಶುಭಾಶಂಸನೆಗೈದರು. ರೇಖಾಪ್ರದೀಪ್ ವಂದಿಸಿದರು. ಸ್ವಾತೀಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.