ತಿರುವನಂತಪುರ: ರಾಜ್ಯದ ಎಲ್ಲ ಶಾಲೆಗಳಲ್ಲಿ ಲೈಂಗಿಕ ಕಿರುಕುಳ ತಡೆ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸುವ ಖಾತರಿ ನೀಡುವಂತೆ ಪ್ರೌಢ ಶಿಕ್ಷಣದ ಕೇಂದ್ರ ಮಂಡಳಿ ಹಾಗೂ ರಾಜ್ಯ ಸರಕಾರಕ್ಕೆ ಕೇರಳ ಉಚ್ಚ ನ್ಯಾಯಾಲಯ ಶುಕ್ರವಾರ ನಿರ್ದೇಶಿಸಿದೆ.
ಶಾಲಾ ಪಠ್ಯದ ಕಡ್ಡಾಯ ಭಾಗವಾಗಿ ಇಂತಹ ಕಾರ್ಯಕ್ರಮಗಳನ್ನು ಸೇರಿಸುವಂತೆ ಶಾಲೆಗಳಿಗೆ ಸಿಬಿಎಸ್‌ಇ ಹಾಗೂ ಕೇರಳ ಸರಕಾರ ನಿರ್ದೇಶಿಸಬೇಕು ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥೋಮಸ್ ಅವರು ಸೂಚಿಸಿದ್ದಾರೆ.
15 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ 23 ವರ್ಷದ ವ್ಯಕ್ತಿಯ ಜಾಮೀನು ಅರ್ಜಿ ಆಲಿಸಿದ ಸಂದರ್ಭ ನ್ಯಾಯಮೂರ್ತಿ ಈ ನಿರ್ದೇಶನಗಳನ್ನು ನೀಡಿದರು.
''ಲೈಂಗಿಕ ಕಿರುಕುಳದ ತಡೆ ಕೇಂದ್ರಿತ ಕಾರ್ಯಕ್ರಮ ಭಾರತ ಸಂವಿಧಾನದ ಕಲಂ 21ಎ ಅಡಿಯಲ್ಲಿ ಶಿಕ್ಷಣದ ಹಕ್ಕಿನ ಭಾಗವಾಗಿದೆ'' ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ದೌರ್ಜನ್ಯದ ವರದಿ ಮಾಡಲು ಹಾಗೂ ತಡೆಯಲು ಮಕ್ಕಳನ್ನು ಸಬಲೀಕರಿಸುವುದು ಶಿಕ್ಷಣ ಪ್ರಕ್ರಿಯೆ ಭಾಗವಾಗಿದೆ ಎಂದು ನ್ಯಾಯಮೂರ್ತಿ ಥಾಮಸ್ ಅಭಿಪ್ರಾಯಪಟ್ಟರು. ''ಲೈಂಗಿಕ ಕಿರುಕುಳ ಸಂತ್ರಸ್ತರ ಧ್ವನಿಯನ್ನು ನಿಗ್ರಹಿಸಬಾರದು. ಸಂತ್ರಸ್ತರು ಈ ಬಗ್ಗೆ ಧ್ವನಿ ಎತ್ತುವಂತೆ ಸಬಲೀಕರಿಸಲು ಶಿಕ್ಷಣದ ಮೂಲಕ ಮಾತ್ರ ಸಾಧ್ಯ'' ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಅದೇ ರೀತಿ ಇದು ಲೈಂಗಿಕ ಕಿರುಕುಳಕ್ಕೆ ನೀಡುವ ಶಿಕ್ಷೆಯ ಅರಿವು ಮೂಡಿಸುತ್ತದೆ. ಇದರಿಂದ ಇಂತಹ ಹೇಯ ಕೃತ್ಯಗಳಲ್ಲಿ ತೊಡಗುವವರನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ತಡೆಯಲು ವಯಸ್ಸಿಗೆ ಅನುಗುಣವಾದ ಕಾರ್ಯಕ್ರಮ ವಿಧಾನದ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ರೂಪಿಸುವಂತೆ ನ್ಯಾಯಾಲಯ ಸಿಬಿಎಸ್‌ಇ ಹಾಗೂ ರಾಜ್ಯ ಸರಕಾರಕ್ಕೆ ತಿಳಿಸಿದೆ. ಸಮಿತಿ 6 ತಿಂಗಳಲ್ಲಿ ವರದಿ ಸಲ್ಲಿಸಬೇಕು. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಿಂದ ಲೈಂಗಿಕ ಶಿಕ್ಷಣದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಿಬಿಎಸ್‌ಇ ಹಾಗೂ ರಾಜ್ಯ ಸರಕಾರ ಆದೇಶ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.