ಪೆರ್ಲ: ಎಣ್ಮಕಜೆ ಗ್ರಾ.ಪಂ. ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಬೃಹತ್ ಸಾರ್ವಜನಿಕ ಮೆರವಣಿಗೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪೆರ್ಲ ಭಾರತೀ ಸದನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಗಮ ಕಾರ್ಯಕ್ರಮ ವೈವಿಧ್ಯಮಯವಾಗಿ ಜರಗಿತು.
ಬೆಳಗ್ಗೆ ಗ್ರಾ.ಪಂ.ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಗಾಂಧೀಜಿಯ ವೇಷ, ಚೆಂಡೆ ಮೇಳಗಳ ವಾದ್ಯಾಘೋಷ, ಎನ್ ಸಿಸಿ ಕೆಡೆಟ್ ಗಳ ಭಾಗವಹಿಸುವಿಕೆಯೊಂದಿಗೆ ವರ್ಣಮಯ ಬೃಹತ್ ಮೆರವಣಿಗೆ ಪೆರ್ಲ ಪೇಟೆಯಲ್ಲಿ ಸಾಗಿ ಪೆರ್ಲ ಭಾರತೀ ಸಭಾ ಭವನದಲ್ಲಿ ಸಂಪನ್ನಗೊಂಡಿತು
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ಮಾತನಾಡುತ್ತಾ "ಭಾರತವು ಜಗತ್ತಿನ ಸ್ವರ್ಗವಾಗಿದೆ.ಕರ್ನಾಟಕದ ಗಡಿಭಾಗಕ್ಕೆ ತಾಗಿಕೊಂಡಿರುವ ಪ್ರಕೃತಿ ರಮಣೀಯ ಪ್ರದೇಶವಾದ ಎಣ್ಮಕಜೆ ಐತಿಹಾಸಿಕ ಪರಂಪರೆಯನ್ನೇ ಹೊಂದಿದೆ.ಪರಂಪರಾಗತ ಕೃಷಿಯೊಂದಿಗೆ ಹಚ್ಚ ಹಸಿರಿನಿಂದ ಕೂಡಿದೆ. ಕಲೆ, ಸಾಹಿತ್ಯ, ಸಂಸ್ಕøತಿಗಳ ಬೆಳವಣಿಗೆಗೆ ಹಲವಾರು ಕೊಡುಗೆಗಳನ್ನೇ ನೀಡಿರುವ ಎಣ್ಮಕಜೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿಮಾನ ಮೂಡಿಸಿದೆ" ಎಂದರು.
ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯರಾದ ನಾವೆಲ್ಲರೂ ಒಂದಾಗಿ ರಾಜಕೀಯ ಪಕ್ಷ ಬೇಧಗಳನ್ನೆಲ್ಲಾ ಮರೆತು ಒಂದಾಗಿ ಚಿಂತಿಸಿ ದೇಶ, ರಾಜ್ಯ, ಜಿಲ್ಲೆ ಮತ್ತು ಪಂಚಾಯಿತಿಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಜಿ.ಪಂ.ಹಾಗೂ ಬ್ಲಾಕ್ ಪಂ.ಸದಸ್ಯರು, ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರು, ವಾರ್ಡ್ ಸದಸ್ಯರು, ಕುಟುಂಬಶ್ರೀ ಸಿಡಿಎಸ್, ಬಾಲಸಭಾ, ಗ್ರಾ.ಪಂ.ಸಿಬ್ಬಂದಿಗಳು, ಅಂಗನವಾಡಿ, ಆಶಾ, ಹರಿತಕರ್ಮ ಸೇನಾ ಕಾರ್ಯಕರ್ತೆಯರು, ವಿವಿಧ ರಂಗದ ಪ್ರಮುಖರು ಭಾಗವಹಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ನಾಡಿಗೆ ಕೊಡುಗೆ ನೀಡಿದ ಹಿರಿಯ ಸಾಧಕರಾದ, ಮಾಜಿ ಗ್ರಾ.ಪಂ.ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಸಿ.ಸಂಜೀವ ರೈ ಕೆಂಗಣಾಜೆ, ವಾರ್ಡ್ ಸದಸ್ಯರಾಗಿದ್ದ ಪತ್ತಡ್ಕ ಗಣಪತಿ ಭಟ್ ಸಹಿತ 23 ಮಂದಿ ಸ್ವಾತಂತ್ರ್ಯ ಪೂರ್ವೋತ್ತರದಲ್ಲಿ ಜನಿಸಿದ ಹಿರಿಯ ತಲೆಮಾರಿನ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಡಾಕ್ಟರೇಟ್ ಪಡೆದ ಸಬಾನಾ ನಿಸಾರ್ ಗುಣಾಜೆ ಹಾಗೂ ಎಸ್ಸೆಸ್ಸೆಲ್ಸಿ, ಪ್ಲಸ್ ಟು ಹಾಗೂ ಪದವಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಗ್ರಾ.ಪಂ.ಕಾರ್ಯದರ್ಶಿ ಅನ್ವರ್ ರಹ್ಮಾನ್ ಸ್ವಾಗತಿಸಿದರು.ಸಹಾಯಕ ಕಾರ್ಯದರ್ಶಿ ಬಿನೀಶ್ ಸಿ.ವಂದಿಸಿದರು.ಶಿಕ್ಷಕ ಅಶ್ರಫ್ ಮತ್ರ್ಯ ಕಾರ್ಯಕ್ರಮ ನಿರ್ವಹಿಸಿದರು.
ಮಧ್ಯಾಹ್ನ ಕುಟುಂಬಶ್ರೀ ಸಿಡಿಎಸ್, ಬಾಲಸಭಾ, ಗ್ರಾ.ಪಂ.ಸಿಬ್ಬಂದಿಗಳು, ಅಂಗನವಾಡಿ, ಆಶಾ, ಹರಿತಕರ್ಮ
ಸೇನಾ ಕಾರ್ಯಕರ್ತೆಯರ ದೇಶಭಕ್ತಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ, ಗೀತಾ ಗಾಯನ, 'ಕನಲಾಟ್ಟ ಕೂಟಂ ಪಾಂಡಿ ತಂಡದ 'ಕನಲಾಟ್ಟಂ' ದೇಶಭಕ್ತಿ ಹಾಗೂ ಜಾನಪದ ನೃತ್ತ ಗಾಯನ ಕಾರ್ಯಕ್ರಮ ನಡೆಯಿತು.