ಅಹಮದಾಬಾದ್: ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಅವರೆಲ್ಲರೂ ಉತ್ತಮ ಸಂಸ್ಕಾರವಂತರು ಎಂದಿದ್ದ ಗೋಧ್ರಾ ಕ್ಷೇತ್ರದ ಶಾಸಕ ಸಿ.ಕೆ.ರವುಲಜಿ ಇದೀಗ ಉಲ್ಟಾ ಹೊಡೆದಿದ್ದಾರೆ. ಅತ್ಯಾಚಾರಿಗಳಿಗೆ ಜಾತಿಯೆಂಬುದಿಲ್ಲ ಎಂದು ನಂಬಿರುವುದಾಗಿ ಹೇಳಿಕೆ ನೀಡಿದ್ದಾರೆ.
'ನನ್ನ ನಂಬಿಕೆ ಪ್ರಕಾರ ಅತ್ಯಾಚಾರಿಗಳಿಗೆ ಜಾತಿಯೆಂಬುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ವಿವಾದಕ್ಕೀಡಾದ ಮಾತಿನಂತೆ ನಾನು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ತೋರಿಸಲಾಗಿದೆ. ಯಾರದರೂ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು' ಎಂದು ಸಿ.ಕೆ.ರವುಲಜಿ ಸ್ಪಷ್ಟನೆ ನೀಡಿದ್ದಾರೆ.
ಅತ್ಯಾಚಾರಿಗಳ ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಚಿಸಲಾಗಿದ್ದ ಸಮಿತಿಯಲ್ಲಿ ರವುಲಜಿ, 'ಅವರು ಅಪರಾಧ ಎಸಗಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಅಪರಾಧ ಎಸಗಲು ಒಂದು ಉದ್ದೇಶ ಇರುತ್ತದೆ. ಉತ್ತಮ ಸಂಸ್ಕಾರವಂತರು ಎಂಬುದಾಗಿ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಬಿಲ್ಕಿಸ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಈಗ ಬಿಡುಗಡೆಯಾದವರು ಬ್ರಾಹ್ಮಣ ಸಮುದಾಯದವರು. ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಯಾರೋ ದುರುದ್ದೇಶ ಹೊಂದಿದ್ದಂತೆ ತೋರುತ್ತಿದೆ'ಎಂದಿದ್ದರು.