ಮಲಪ್ಪುರಂ: ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಮೇಲೆ ಕೇರಳದ ಪೊಲೀಸ್ ಅಧಿಕಾರಿಯೊಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಎನ್. ಶೈಲೇಶ್ ಅಮಾನತಗೊಂಡು ಅಧಿಕಾರಿ. ಕೊಂಡಟ್ಟಿಯ ಮೊರಾಯುರ್ ಮೂಲದ ಶೈಲೇಶ್, ಮಲಪ್ಪುರಂನ ತಿರೂರ್ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ತನಿಖೆಯಲ್ಲಿ ಆರೋಪ ಸಾಬೀತಾದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಶೈಲೇಶ್ ಮಾರಕವಾಗಿ ದಾಳಿ ಮಾಡಿದ ಪರಿಣಾಮ ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಲ್ಲದೆ, ಪ್ರಜ್ಞೆಯಿಲ್ಲದೆ ಬಿದ್ದಿದ್ದರು. ಇದನ್ನು ನೋಡಿದ ಮಗ ತಾಯಿಯ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾನೆ. ತಾಯಿಯನ್ನು ಎಷ್ಟೇ ಏಳಿಸಲು ಪ್ರಯತ್ನಿಸಿದರು ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಕ್ಷಣ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆರೋಪಿ ಶೈಲೇಶ್ ತನ್ನ ಪತ್ನಿಯ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ಅಲ್ಲದೆ, ಆಕೆಯನ್ನು ಮೃಗದಂತೆ ಕಚ್ಚಿದ್ದಾನೆ. ಪರಿಣಾಮ ಆಕೆಯ ದೇಹದಾದ್ಯಂತ ಗಾಯಗಳಿದ್ದವು. ಆಕೆಯ ಬೆರಳುಗಳೂ ಸಹ ಮುರಿದಿವೆ.
ಸದ್ಯ ಆಕೆಯನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ದಂಪತಿ 2014 ರಲ್ಲಿ ವಿವಾಹವಾದರು.