ಕುಂಬ್ಡಾಜೆ:ತಲಸ್ಸೇಮಿಯಾದಿಂದ ಬಳಲುತ್ತಿರುವ ಕುಂಬ್ಡಾಜೆ ಕಜಮಲೆ ನಿವಾಸಿ, ಉದಯ-ಸವಿತಾ ದಂಪತಿ ಪುತ್ರಿ ಏಳರ ಹರೆಯದ ಬಾಲಕಿ ಸಾನ್ವಿಗೆ ಅಸ್ಥಿಮಜ್ಜೆ ಕಸಿ(ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟೇಶನ್)ಚಿಕಿತ್ಸೆ ಬೆಂಗಳೂರಿನ ನಾರಾಯಣ ಹೃದಯಾಲಯದ ವಿಶೇಷ ಘಟಕದಲ್ಲಿ ಆರಂಭಗೊಂಡಿದ್ದು, ನೂರಾರು ಮಂದಿಯ ಪ್ರಾರ್ಥನೆ ಮತ್ತು ಧನಸಹಾಯದ ನೆರವು ಸಾರ್ಥಕ್ಯದತ್ತ ಸಾಗುವಂತಾಗಿದೆ. ವೈದ್ಯರ ಪ್ರಕಾರ ಚಿಕಿತ್ಸೆಗೆ ಸುಮಾರು 40ಲಕ್ಷ ರೂ. ವೆಚ್ಚ ತಗುಲಲಿದ್ದು, ಈ ಮೊತ್ತವನ್ನು ಸಾನ್ವಿ ಚಿಕಿತ್ಸಾ ಸಮಿತಿ ನಾರಾಯಣ ಹೃದಯಾಲಯಕ್ಕೆ ಕಳುಹಿಸಿಕೊಟ್ಟಿದೆ. ಸಾನ್ವಿಯನ್ನು ಜುಲೈ 25ರಂದು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದ್ದು, ಇವರ ಹೆತ್ತವರೂ ಬೆಂಗಳೂರಿನಲ್ಲಿದ್ದು, ಪುತ್ರಿಯ ಆರೈಕೆಯಲ್ಲಿ ತೊಡಗಿದ್ದಾರೆ.
ಕುಂಬ್ಡಾಜೆ ಪಂಚಾಯಿತಿ ನಾರಂಪಾಡಿಯ ಫಾತಿಮಾ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾನ್ವಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ಥಿಮಜ್ಜೆ ಕಸಿ ನಡೆಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ 'ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ' ರಚಿಸಿ ಧನಸಂಗ್ರಹ ನಡೆಸುವ ಮೂಲಕ ಪ್ರಸಕ್ತ ಚಿಕಿತ್ಸೆ ಆರಂಭಿಸಲಾಗಿದೆ. ಚಿಕಿತ್ಸೆಯ ಪೂರ್ವೋತ್ತರ ತಪಾಸಣಾ ಕಾರ್ಯವನ್ನು ತಜ್ಞ ವೈದ್ಯರ ತಂಡ ಪೂರೈಸಿದ್ದು, ಎಲ್ಲಾ ವ್ಯವಸ್ಥೆ ಸಮರ್ಪಕವಾಗಿರುವುದರಿಂದ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಆರಂಭಿಸಿರುವುದಾಗಿ ಸಾನ್ವಿ ಚಿಕಿತ್ಸಾ ತಂಡದ ವೈದ್ಯರು ತಿಳಿಸಿದ್ದಾರೆ. ಸಾನ್ವಿ ಚಿಕಿತ್ಸಾ ಸಹಾಯಕ್ಕಾಗಿ ಬದಿಯಡ್ಕ, ಬೆಳ್ಳೂರು, ಕಾರಡ್ಕ, ಎಣ್ಮಕಜೆ, ಬದಿಯಡ್ಕ, ಚೆರ್ಕಳ ಪಂಚಾಯಿತಿ, ಕಾಸರಗೋಡು ನಗರಸಭಾ ಪ್ರದೇಶ ಜನತೆ, ಸಂಘ ಸಂಸ್ಥೆಗಳು, ಆಟೋ ಚಾಲಕರು, ಪೊಲೀಸ್, ಶಾಲೆ, ಕುಟುಂಬಶ್ರೀ, ಸರ್ಕಾರಿ ಕಚೇರಿ ಹೀಗೆ ಎಲ್ಲ ಕಡೆಗಳಿಂದಲೂ ಹಣ ಸಂಗ್ರಹಿಸಲಾಗಿದೆ. ಹಂತ ಹಂತವಾಗಿ ಚಿಕಿತ್ಸೆ ಮುಂದುವರಿಯಲಿದೆ.
ಕುಂಬ್ಡಾಜೆ ಬಾಲೆಗೆ ಬೆಂಗಳೂರಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಆರಂಭ
0
ಆಗಸ್ಟ್ 25, 2022
Tags