ನವದೆಹಲಿ : ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದಿನ ದಿನಗಳಲ್ಲಿ ವಿಷಯ ತಜ್ಞರನ್ನೂ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿಕೊಳ್ಳಬಹುದಾಗಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಇದಕ್ಕಾಗಿ 'ಪ್ರೊಫೇಸರ್ಸ್ ಆಫ್ ಪ್ರಾಕ್ಟೀಸ್' ಎಂಬ ಯೋಜನೆ ಸಿದ್ಧಪಡಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ಕಾರ್ಯಗತಗೊಳ್ಳಲಿದೆ.
ಕಳೆದ ವಾರ ನಡೆದ ಯುಜಿಸಿಯ 560ನೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ತಿಂಗಳು ಈ ಸಂಬಂಧ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
'ಎಂಜಿನಿಯರಿಂಗ್, ವಿಜ್ಞಾನ, ಮಾಧ್ಯಮ, ಸಾಹಿತ್ಯ, ನವೋದ್ಯಮ, ಸಮಾಜವಿಜ್ಞಾನ, ಲಲಿತಕಲೆ, ನಾಗರಿಕ ಸೇವೆ, ಸಶಸ್ತ್ರ ಪಡೆ ಹಾಗೂ ಇತರೆ ಕ್ಷೇತ್ರಗಳ ಶೇ 10ರಷ್ಟು ಪರಿಣತರನ್ನು ಬೋಧನಾ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬಹುದು. ಪ್ರಾಧ್ಯಾಪಕ ಹುದ್ದೆಗೆ ನಿಗದಿಪಡಿಸಲಾಗಿರುವ ಮಾನದಂಡಗಳು ಇವರಿಗೆ ಅನ್ವಯವಾಗುವುದಿಲ್ಲ. ಪ್ರತಿಷ್ಠಿತ ನಿಯತಕಾಲಿಕೆ ಅಥವಾ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿರಲೇಬೇಕು ಎಂಬ ನಿಯಮವೂ ಇವರಿಗೆ ಕಡ್ಡಾಯವಲ್ಲ' ಎಂದು ಹೇಳಲಾಗಿದೆ.
'ನಿಗದಿತ ಕ್ಷೇತ್ರಗಳಲ್ಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರುವ ಅಥವಾ ಅನುಭವ ಹೊಂದಿರುವ 'ಹಿರಿಯರು' 'ಪ್ರೊಫೇಸರ್ಸ್ ಆಫ್ ಪ್ರಾಕ್ಟೀಸ್' ಯೋಜನೆಗೆ ಅರ್ಹರಾಗಿರುತ್ತಾರೆ. ಇವರು ನಿರ್ದಿಷ್ಟ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿಭಾಯಿಸುವ ಕೌಶಲವನ್ನು ಹೊಂದಿರಬೇಕು' ಎಂದು ಯುಜಿಸಿ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
'ಉನ್ನತ ಶಿಕ್ಷಣ ಸಂಸ್ಥೆಯೊಂದು ಎಂತಹುದೇ ಸಂದರ್ಭದಲ್ಲಿಯೂ ಶೇ 10ಕ್ಕಿಂತಲೂ ಹೆಚ್ಚು ತಜ್ಞರನ್ನು ನೇಮಿಸಿಕೊಳ್ಳುವಂತಿಲ್ಲ. ಶಿಕ್ಷಣ ಸಂಸ್ಥೆ ಹಾಗೂ ತಜ್ಞರ ನಡುವಣ ಒಪ್ಪಂದದ ಅನುಸಾರವೇ ಇವರಿಗೆ ಸಂಭಾವನೆ ನೀಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅಥವಾ ನಿವೃತ್ತರಾದವರು ಈ ಯೋಜನೆಗೆ ಒಳಪಡುವುದಿಲ್ಲ' ಎಂದೂ ಹೇಳಲಾಗಿದೆ.
'ಈ ಯೋಜನೆಯಡಿ ನೇಮಕವಾಗುವವರ ಕಾರ್ಯಾವಧಿ ಒಂದು ವರ್ಷದ್ದಾಗಿರುತ್ತದೆ. ಕಾರ್ಯವೈಖರಿ ಆಧಾರದಲ್ಲಿ ಅವರನ್ನು ಮುಂದುವರಿಸುವ ಕುರಿತು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ನಿರ್ಣಯ ಕೈಗೊಳ್ಳಬಹುದು. ತಜ್ಞರೊಬ್ಬರ ಸೇವಾವಧಿಯು ನಾಲ್ಕು ವರ್ಷ ಮೀರುವಂತಿಲ್ಲ' ಎಂದು ಹೇಳಿದೆ.
'ಕುಲಪತಿಗಳು ಹಾಗೂ ನಿರ್ದೇಶಕರು 'ಪ್ರೊಫೇಸರ್ಸ್ ಆಫ್ ಪ್ರಾಕ್ಟೀಸ್' ಹುದ್ದೆಗೆ ತಜ್ಞರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಬಹುದು. ಆಸಕ್ತರು ತಮ್ಮ ಸ್ವ ವಿವರವನ್ನೊಳಗೊಂಡ ಅರ್ಜಿಯನ್ನು ಕುಲಪತಿಯವರಿಗೆ ಸಲ್ಲಿಸಬಹುದು. ಉನ್ನತ ಶಿಕ್ಷಣ ಸಂಸ್ಥೆಯೊಂದರ ಇಬ್ಬರು ಹಿರಿಯ ಪ್ರಾಧ್ಯಾಪಕರನ್ನೊಳಗೊಂಡ ಆಯ್ಕೆ ಸಮಿತಿ ಈ ಅರ್ಜಿಗಳನ್ನು ಪರಿಶೀಲಿಸಲಿದೆ. ಸಮಿತಿಯ ಶಿಫಾರಸಿನ ಆಧಾರದಲ್ಲಿ ಶೈಕ್ಷಣಿಕ ಅಥವಾ ಕಾರ್ಯಕಾರಿ ಮಂಡಳಿಯು ಇವರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ನಿರ್ಣಯ ಕೈಗೊಳ್ಳಲಿದೆ' ಎಂದೂ ವಿವರಿಸಲಾಗಿದೆ.