ನವದೆಹಲಿ : ಡಿಜಿಟಲ್ ಪಾವತಿಗಳ (Digital Payments)ಮೇಲೆ ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಸರಕಾರದ ಅಭಿಪ್ರಾಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman)ಶುಕ್ರವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಾರಾಮನ್, "ನಾವು ಡಿಜಿಟಲ್ ಪಾವತಿಯನ್ನು ಸಾರ್ವಜನಿಕರ ಒಳಿತಾಗಿ ನೋಡುತ್ತೇವೆ. ಜನರು ಅದನ್ನು ಮುಕ್ತವಾಗಿ ಬಳಸಲು ಸಾಧ್ಯವಾಗುತ್ತದೆ. ಇದರಿಂದ ಭಾರತೀಯ ಆರ್ಥಿಕತೆಯ ಡಿಜಿಟಲೀಕರಣವು ಆಕರ್ಷಕವಾಗುತ್ತದೆ. ಅಲ್ಲದೆ, ಡಿಜಿಟಲೀಕರಣದ ಮೂಲಕ ನಾವು ಪಾರದರ್ಶಕತೆಯ ಮಟ್ಟವನ್ನು ಸಾಧಿಸುತ್ತೇವೆ. ಇದು ತುಂಬಾ ಅಗತ್ಯವಿದೆ"ಎಂದರು.
"ಆದ್ದರಿಂದ, ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ನಾವು ಈಗಲೂ ಭಾವಿಸುತ್ತೇವೆ. ಮುಕ್ತ ಡಿಜಿಟಲ್ ವಹಿವಾಟುಗಳು, ಡಿಜಿಟಲೀಕರಣ ಹಾಗೂ ಸುಲಭವಾಗಿ ಬಳಕೆಯನ್ನು ಸಕ್ರಿಯಗೊಳಿಸುವ ಪ್ಲಾಟ್‌ಫಾರ್ಮ್‌ಗಳತ್ತ ನಾವು ಹೆಚ್ಚು ಹೆಚ್ಚು ಉತ್ತೇಜಿಸುತ್ತಿದ್ದೇವೆ''ಎಂದು ಸಚಿವರು ಹೇಳಿದರು.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಮಾಡಿದ ವಹಿವಾಟುಗಳ ಮೇಲೆ ಶ್ರೇಣೀಕೃತ ಶುಲ್ಕಗಳನ್ನು ವಿಧಿಸುವ ಸಾಧ್ಯತೆಯೂ ಸೇರಿದಂತೆ ಪಾವತಿ ವ್ಯವಸ್ಥೆಯಲ್ಲಿ ಪ್ರಸ್ತಾಪಿಸಲಾದ ವಿವಿಧ ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿಕ್ರಿಯೆಯನ್ನು ಕೋರಿದ ಹಿನ್ನೆಲೆಯಲ್ಲಿ ವಿತ್ತ ಸಚಿವರು ಈ ಹೇಳಿಕೆ ನೀಡಿದ್ದಾರೆ
ಆದಾಗ್ಯೂ, UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಭಾರತ ಸರಕಾರ ಕಳೆದ ವಾರ ಘೋಷಿಸಿತು.