ಪ್ರಯಾಗ್‌ರಾಜ್: ಶ್ರೀಕೃಷ್ಣನ 'ವಾಸ್ತವ ಜನ್ಮಸ್ಥಳ'ವಾದ ಮಥುರಾದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಕೆಲ ಭಕ್ತರ ಅರ್ಜಿ ಕುರಿತಂತೆ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಸದ್ಯ, ಈ ಸ್ಥಳವು ಈದ್ಗಾ ಮಸೀದಿ ಟ್ರಸ್ಟ್‌ನ ಸುಪರ್ದಿಯಲ್ಲಿದೆ ಎಂದು ಅರ್ಜಿದಾರರು ವಾದಿಸಿದ್ದರು. ಪ್ರಕರಣ ಕುರಿತಂತೆ ಪ್ರಮಾಣಪತ್ರ ಸಲ್ಲಿಸುವಂತೆ ಎರಡೂ ಕಡೆಯ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿತು. ರಿಜಿಸ್ಟ್ರಾರ್ ಅವರು ವಿಚಾರಣೆಯ ಮುಂದಿನ ದಿನಾಂಕ ಗೊತ್ತುಪಡಿಸಲಿದ್ದಾರೆ.
ಅರ್ಜಿದಾರರು ಮತ್ತು ಪ್ರತಿವಾದಿಗಳು ನಾಲ್ಕು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಬಹುದು ಎಂದು ಕೋರ್ಟ್ ಇದೇ ವೇಳೆ ಸೂಚಿಸಿತು.
ಮಥುರಾದ ಜಿಲ್ಲಾ ನ್ಯಾಯಾಲಯವು ಮೇ 19, 2022ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.