ನವದೆಹಲಿ: ಮೊದಲ ಎರಡು ವರ್ಷ ಶಿಶುವಿನ ಚಲನವಲನಗಳಲ್ಲಿ ಆಗುವ ಪ್ರಗತಿ, ಬದಲಾವಣೆಗಳನ್ನು ಗುರುತಿಸಲು ತಂದೆ-ತಾಯಿಗೆ ನೆರವಾಗುವಂತೆ ರೂಪಿಸಿದ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಮಂಗಳವಾರ ಬಿಡುಗಡೆಗೊಳಿಸಿದರು.
ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಆರೋಗ್ಯ, ಸಂವೇದನೆ ಕುರಿತಂತೆ ಶಿಶುವಿನ ಸಮಗ್ರ ಬೆಳವಣಿಗೆಯಲ್ಲಿ ಮೊದಲ ಸಾವಿರ ದಿನಗಳು ನಿರ್ಣಾಯಕವಾಗಿವೆ ಎಂದು ಸಚಿವೆ ಇದೇ ಸಂದರ್ಭದಲ್ಲಿ ಹೇಳಿದರು.
ನೂತನ ಅಪ್ಲಿಕೇಷನ್‌ನಲ್ಲಿ ಪಾಲಕರಿಗೆ ಶಿಶುಪಾಲನೆಗೆ ಅನುಸರಿಸಬೇಕಾದ ಕ್ರಮಗಳು ಕುರಿತಂತೆ ಸಲಹೆಗಳು ಇರಲಿವೆ. ನಿತ್ಯ ಅನುಸರಿಸಬೇಕಾದ ಕ್ರಮ, ಪಾಲಕರಲ್ಲಿ ಮೂಡಬಹುದಾದ ಅನುಮಾನಗಳಿಗೆ ಉತ್ತರಗಳನ್ನು ಒದಗಿಸಲಿದೆ.
ಶಿಶು ಮರಣ ಪ್ರಮಾಣದ ಅನುಪಾತ 2014ರಲ್ಲಿ 45:1000 ಇದ್ದರೆ, 2019ರಲ್ಲಿ 35:1000ಕ್ಕೆ ಇಳಿದಿತ್ತು. ಈ ಪ್ರಗತಿಗೆ 'ಪಾಲನ್ 1000' ರಾಷ್ಟ್ರೀಯ ಅಭಿಯಾನ ಮತ್ತು ಪಾಲಕರಿಗಾಗಿ ಬಿಡುಗಡೆ ಮಾಡಿದ್ದ ಮೊಬೈಲ್ ಅಪ್ಲಿಕೇಷನ್ ಕೂಡಾ ಕಾರಣವಾಗಿತ್ತು ಎಂದು ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿದೆ.