ನವದೆಹಲಿ: ಮಾರ್ಚ್ 9ರಂದು ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಪ್ರಕರಣದ ಉನ್ನತ ಮಟ್ಟದ ತನಿಖೆ ನಂತರ ಇದೀಗ ಮೂವರು ವಾಯುಪಡೆ ಅಧಿಕಾರಿಗಳನ್ನು ರಕ್ಷಣಾ ಸಚಿವಾಲಯ ವಜಾಗೊಳಿಸಿದೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಆಕಸ್ಮಿಕವಾಗಿ 2022ರ ಮಾರ್ಚ್9ರಂದು ಉಡಾಯಿಸಲಾಗಿದೆ. ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ತಿಳಿಯಲು ಸ್ಥಾಪಿಸಲಾದ ವಿಚಾರಣಾ ನ್ಯಾಯಾಲಯವು ಮೂವರು ಅಧಿಕಾರಿಗಳು ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲು ಕಾರಣರಾದರು ಎಂದು ತಿಳಿಸಿದೆ ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ವಜಾಗೊಳಿಸಿದೆ. 23 ಆಗಸ್ಟ್ 22 ರಂದು ಅಧಿಕಾರಿಗಳಿಗೆ ವಜಾಗೊಳಿಸುವ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಮಾರ್ಚ್‌ನಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಭಾರತದ ಕಡೆಯಿಂದ ಆಕಸ್ಮಿಕವಾಗಿ ಕ್ಷಿಪಣಿಯನ್ನು ಹಾರಿಸಲಾಯಿತು. ಇದನ್ನು ರಕ್ಷಣಾ ಸಚಿವಾಲಯವು ತೀವ್ರ ವಿಷಾದನೀಯ ಎಂದು ಕರೆದಿತ್ತು. ಅಲ್ಲದೆ ತಾಂತ್ರಿಕ ಅಸಮರ್ಪಕವನ್ನು ದೂಷಿಸಿತು.
ಪಾಕಿಸ್ತಾನದ ಪ್ರಕಾರ, ಕ್ಷಿಪಣಿಯು ತನ್ನ ವಾಯುಪ್ರದೇಶದೊಳಗೆ 100 ಕಿ.ಮೀ.ಗೂ ಹೆಚ್ಚು ದೂರ, 40,000 ಅಡಿ ಎತ್ತರದಲ್ಲಿ ಮತ್ತು ಅದು ಲ್ಯಾಂಡ್ ಆಗುವ ಮೊದಲು ಶಬ್ದದ ಮೂರು ಪಟ್ಟು ವೇಗದಲ್ಲಿ ಹಾರಿತು. ಆದರೆ ಕ್ಷಿಪಣಿಯಲ್ಲಿ ಸ್ಫೋಟಿಸಲಿಲ್ಲ ಎಂದು ಹೇಳಿದೆ.
ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿದೆ.