ಕಾಸರಗೋಡು: ಜಿಲ್ಲೆಯಲ್ಲಿ ಬಿಜೆಪಿ ಆಂತರಿಕ ಕಲಹ ಮತ್ತೆ ಸ್ಪೋಟಗೊಂಡು ಬೀದಿಗೆ ಬರುವಂತಾಗಿದೆ. ಈ ಹಿಂದೆ ಬಿಜೆಪಿ ಕಾರ್ಯಕರ್ತರೊಬ್ಬರ ಹತ್ಯೆಯಲ್ಲಿ ಶಾಮೀಲಾಗಿದ್ದ ಸಿಪಿಎಂ ಸದಸ್ಯನಿಗೆ ಕುಂಬಳೆ ಗ್ರಾಪಂನಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಲು ಕಾರಣಕರ್ತರಾಗಿರುವುದಲ್ಲದೆ, ಇನ್ನಿತರ ವಿಷಯಗಳ ಬಗ್ಗೆ ಜಿಲ್ಲೆಯ ಮೂವರು ಬಿಜೆಪಿ ಮುಖಂಡರ ವಿರುದ್ಧ ರಾಜ್ಯ ಸಮಿತಿ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಕಚೇರಿ ಎದುರು ಕಾರ್ಯಕರ್ತರು ಧರಣಿ ಆರಂಭಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿ ನಾಲ್ಕು ತಿಂಗಳ ಹಿಂದೆ ಕಾಸರಗೋಡು, ಕುಂಬಳೆ ಹಾಗೂ ಮಂಜೇಶ್ವರದ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ನಂತರ ರಾಜ್ಯ ಹಾಗೂ ಜಿಲ್ಲಾ ಸಮಿತಿ ಮುಖಂಡರು ಮಧ್ಯಸ್ಥಿಕೆ ವಹಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದರೂ, ಮುಖಂಡರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಕುಂಬಳೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿಪಿಎಂ ಮುಖಂಡನಿಗೆ ಪಂಚಾಯಿತಿಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷಸ್ಥಾನ ಲಭಿಸಲು ಈ ಮೂವರು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೆ ಹೋರಾಟ ಮುಂದುವರಿಸುವುದಾಗಿ ಧರಣಿ ನಿರತ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.
ಸ್ಪೋಟಗೊಂಡ ಭಿನ್ನಮತ: ಮತ್ತೆ ಧರಣಿ ಆರಂಭಿಸಿದ ಬಿಜೆಪಿ ಕಾರ್ಯಕರ್ತರು
0
ಆಗಸ್ಟ್ 04, 2022