HEALTH TIPS

ದೇಶದ ಸುರಕ್ಷತೆ, ಪ್ರಗತಿ, ಸಮೃದ್ಧಿಗಾಗಿ ಪಣತೊಡೋಣ: ರಾಷ್ಟ್ರಪತಿ ಮುರ್ಮು ಚೊಚ್ಚಲ ಸ್ವಾತಂತ್ರ್ಯೋತ್ಸವ ಭಾಷಣ

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮುನ್ನಾ ದಿನವಾದ ರವಿವಾರ ದೇಶವನ್ನುದ್ದೇಶಿಸಿ ತನ್ನ ಚೊಚ್ಚಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು.

ದಮನಿತರು, ಬಡವರು, ಉಪೇಕ್ಷಿತರಿಗಾಗಿ ಸಹಾನುಭೂತಿ, ಅನುಕಂಪವನ್ನು ತೋರುವುದು ಭಾರತದ ಮುಖ್ಯ ಪರಿಕಲ್ಪನೆಯಾಗಬೇಕೆಂದು ಪ್ರತಿಪಾದಿಸಿರುವ ರಾಷ್ಟ್ರಪತಿಯವರು ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಹಾಗೂ ಸಮೃದ್ಧಿಗಾಗಿ ಪ್ರತಿಯೊಬ್ಬ ನಾಗರಿಕರೂ ಶ್ರಮಿಸಬೇಕೆಂದು ಕರೆ ನೀಡಿದರು.

ಭವ್ಯ ಭಾರತದ ನಿರ್ಮಾಣದಿಂದ ಮಾತ್ರವೇ ಪೌರರ ಜೀವನ ಅರ್ಥಪೂರ್ಣವಾಗಲಿದೆಯೆಂದು ಅವರು ಹೇಳಿದರು.

ಎಲ್ಲರನ್ನೂ ಒಳಪಡಿಸಿಕೊಂಡು ಭಾರತದ ಆರ್ಥಿಕತೆಯು ಬೆಳವಣಿಗೆಯನ್ನು ಸಾಧಿಸುತ್ತಿದೆ ಹಾಗೂ ಲಿಂಗ ತಾರತಮ್ಯ ಕೂಡಾ ಕಡಿಮೆಯಾಗುತ್ತಿದೆಯೆಂದವರು ಸಂತೃಪ್ತಿ ವ್ಯಕ್ತಪಡಿಸಿದರು.

'' ತನ್ನ ಯುವಜನತೆ,ರೈತರು ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಮಹಿಳೆಯರ ಮೂಲಕ ಭಾರತದ ಆತ್ಮವಿಶ್ವಾಸವು ಹೊಸತಾಗಿ ಚಿಗುರೊಡೆಯುತ್ತಿದೆ. ಲಿಂಗತಾರತಮ್ಯತೆ ಕ್ಷೀಣಿಸುತ್ತಿದೆ ಹಾಗೂ ಮಹಿಳೆಯರು ಎಲ್ಲಾ ಅಡೆತಡೆಗಳನ್ನು ಮುರಿದು ಮುನ್ನಡೆ ಸಾಧಿಸುತ್ತಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ಪ್ರಕ್ರಿಯೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ತಳಮಟ್ಟದಲ್ಲಿ, ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ನಾವು 14 ಲಕ್ಷಕ್ಕೂ ಅಧಿಕ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ನಾವು ಹೊಂದಿದ್ದೇವೆ'' ಎಂದು ಅವರು ಹೇಳಿದ್ದಾರೆ.

''1947ರ ಆಗಸ್ಟ್ 15ರಂದು ನಾವು ವಸಾಹತುಶಾಹಿ ಆಡಳಿತದ ಸಂಕೋಲೆಗಳನ್ನು ಕಡಿದುಹಾಕಿದೆವು. ಆ ಪವಿತ್ರ ದಿನದ ವರ್ಷಾಚರಣೆಯನ್ನು ನಾವೀಗ ಆಚರಿಸುತ್ತಿದ್ದೇವೆ. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಮ್ಮ ನಮನಗಳು. ಅವರ ತ್ಯಾಗದಿಂದಾಗಿ ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ'' ಎಂದು ದ್ರೌಪದಿ ಮುರ್ಮು ತಿಳಿಸಿದರು.

''2047ನೇ ಇಸವಿಯೊಳಗೆ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತೇವೆ. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದವರ ದೂರದೃಷ್ಟಿಗೆ ನಾವು ದೃಢವಾದ ರೂಪವನ್ನು ನೀಡುತ್ತಿದ್ದೇವೆ'' ಎಂದು ಮುರ್ಮು ತಿಳಿಸಿದರು.

ಅತ್ಯಂತ ಸದೃಢವಾದ ಪ್ರಜಾಸತ್ತೆಯಿರುವ ದೇಶಗಳಲ್ಲಿಯೂ ಮತದಾನದ ಹಕ್ಕನ್ನು ಪಡೆಯಲು ಮಹಿಳೆಯರು ದೀರ್ಘಕಾಲದ ಹೋರಾಟ ನಡೆಸಬೇಕಾಗಿ ಬಂದಿತ್ತು. ಆದರೆ ಭಾರತದ ಗಣರಾಜ್ಯದ ಆರಂಭದಲ್ಲಿಯೇ ಎಲ್ಲಾ ವಯಸ್ಕ ಪೌರರಿಗೆ ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಲಾಗಿತ್ತು. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ವಯಸ್ಕ ಪೌರನೂ ಸಾಮೂಹಿಕವಾಗಿ ಪಾಲ್ಗೊಳ್ಳುವಂತೆ ಆಧುನಿಕ ಭಾರತದ ನಿರ್ಮಾಪಕರು ಅವಕಾಶ ಮಾಡಿಕೊಟ್ಟಿದ್ದರು. ಪ್ರಜಾಪ್ರಭುತ್ವದ ನೈಜ ಸಾಮರ್ಥ್ಯವನ್ನು ಕಂಡುಹಿಡಿಯಲು ನೆರವಾದ ಶ್ರೇಯಸ್ಸು ಭಾರತಕ್ಕೆ ಸಲ್ಲಬೇಕಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದರು.

ಪ್ರತಿ ವರ್ಷವೂ ನವೆಂಬರ್ 15ನೇ ದಿನಾಂಕವನ್ನು ಬುಡಕಟ್ಟು ಜನರ ಸಾಧನೆ, ಕೊಡುಗೆಗಳ ಬಗ್ಗೆ ಗಮನಸೆಳೆಯಲು ಜನಜಾತೀಯ ಗೌರವ್ ದಿವಸ್ ಆಚರಿಸುವ ಕೇಂದ್ರದ ನಿರ್ಧಾರವನ್ನು ಮುರ್ಮು ಸ್ವಾಗತಿಸಿದರು. '' ನಮ್ಮ ಬುಡಕಟ್ಟು ಜನಾಂಗದ ಸೂಪರ್‌ಹೀರೋಗಳು ಕೇವಲ ಸ್ಥಳೀಯ ಹಾಗೂ ಪ್ರಾದೇಶಿಕ ಪ್ರತೀಕಗಳು ಮಾತ್ರವೇ ಅಲ್ಲ. ಅವರು ಇಡೀ ದೇಶಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ'' ಎಂದು ಬುಡಕಟ್ಟು ಸಮುದಾಯಕ್ಕೆ ಸೇರಿದ ಪ್ರಪ್ರಥಮ ರಾಷ್ಟ್ರಪತಿಯೆಂಬ ಹೆಗ್ಗಳಿಕೆ ಪಾತ್ರರಾದ ಮುರ್ಮು ಹಳಿದ್ದಾರೆ. ಹೇಳಿದ್ದಾರೆ.

ಕುವೆಂಪು ಕವನ ಉಲ್ಲೇಖಿಸಿದ ಮುರ್ಮು

ತಾಯ್ನಾಡಿಗಾಗಿ ಹಾಗೂ ಸಹಪೌರರ ಉದ್ಧಾರಕ್ಕಾಗಿ ಸಂಪೂರ್ಣ ತ್ಯಾಗಕ್ಕೆ ಸಿದ್ಧರಾಗುವಂತೆ ಕನ್ನಡ ಮಹಾನ್‌ಕವಿ ಕುವೆಂಪು ಅವರ ಕವನದ ಸಾಲನ್ನು ರಾಷ್ಟ್ರಪತಿ ಮುರ್ಮು ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ''ನಾನು ಅಳಿವೆ, ನೀನು ಅಳಿವೆ, ನಮ್ಮ ಎಲುಬುಗಳ ಮೇಲೆ ಮೂಡುವುದು ನವಭಾರತದ ಲೀಲೆ'' ಎಂಬ ಕುವೆಂಪು ಕವನದ ಸಾಲನ್ನು ಅವರು ಪ್ರಸ್ತಾವಿಸಿದರು.

2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ನವಭಾರತವನ್ನು ನಿರ್ಮಿಸಲು ಹೊರಟಿರುವ ಯುವಜನಾಂಗವು ಕುವೆಂಪು ಅವರ ಕವನದ ಆದರ್ಶಗಳನ್ನು ಪಾಲಿಸಬೇಕೆಂದು ರಾಷ್ಟ್ರಪತಿ ಕರೆ ನೀಡಿದರು.

ರಾಷ್ಟ್ರಪತಿ ಭಾಷಣದ ಕೆಲವು ಮುಖ್ಯಾಂಶಗಳು

1.ಭಾರತದಲ್ಲಿ ಪ್ರಜಾತಾಂತ್ರಿಕ ಸ್ವರೂಪದ ಸರಕಾರದ ಯಶಸ್ಸು ಸಾಧಿಸುವ ಬಗ್ಗೆ ಅಂತಾರಾಷ್ಟ್ರೀಯ ನಾಯಕರು ಹಾಗೂ ತಜ್ಞರಿಗೆ ಸಂಶಯವಿತ್ತು. ಆದರೆ ಭಾರತೀಯರು ಈ ಸಂದೇಹಗಳೆಲ್ಲವೂ ಸುಳ್ಳೆಂಬುದನ್ನು ಸಾಬೀತುಪಡಿಸಿದ್ದಾರೆ. ಈ ನೆಲದಲ್ಲಿ ಪ್ರಜಾಪ್ರಭುತ್ವವು ಬೇರುಬಿಟ್ಟಿದೆ ಮಾತ್ರವಲ್ಲ ಅದು ಸಮೃದ್ಧಿಗೊಂಡಿದೆ ಎಂದವರು ಹೇಳಿದರು.

2.''ನಮ್ಮ ಈ ಪ್ರೀತಿಯ ದೇಶವು ನಮಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟಿದೆ. ದೇಶದ ಸುರಕ್ಷತೆ,,ಪ್ರಗತಿ ಹಾಗೂ ಸಮೃದ್ಧಿಗಾಗಿ ನಮಗೆ ಸಾಧ್ಯವಾಗುವ ಮಟ್ಟಿಗೆ ಕೊಡುಗೆ ನೀಡುವ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕಾಗಿದೆ.

3.ಕೈಗಾರಿಕಾ ಕ್ರಾಂತಿಯ ಮುಂದಿನ ಹಂತಕ್ಕೆ ಭವಿಷ್ಯದ ತಲೆಮಾರನ್ನು ಸಿದ್ಧಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ನೆರವಾಗಲಿದೆ

4. ಭವ್ಯ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಿದಲ್ಲಿ ಮಾತ್ರವೇ ನಮ್ಮ ಅಸ್ತಿತ್ವವು ಅರ್ಥಪೂರ್ಣವಾಗಲಿದೆ.

5. ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತವು ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಉತ್ತಮ ಸಾಧನೆಯನ್ನು ಮಾಡಿದೆ. ಭಾರತವು ಕೋವಿಡ್ ನಿರೋಧಕ ಲಸಿಕೆ ಡೋಸ್‌ಗಳ ನೀಡಿಕೆಯಲ್ಲಿ ಭಾರತವು 200 ಕೋಟಿ ಗಡಿಯನ್ನು ದಾಟಿದೆ.

6. ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳೊಂದಿಗೆ ಹೋರಾಡುತ್ತಿದ್ದಾಗ, ಭಾರತ ಕೂಡಾ ಜೊತೆಗೂಡಿ ಸಮರ್ಥವಾಗಿ ಎದುರಿಸಿತು ಮತ್ತು ಮುನ್ನಡೆ ಸಾಧಿಸುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು.

7.ದೇಶವಿಭಜನೆಯ ಕರಾಳತೆಗಳನ್ನು ಸ್ಮರಿಸುವ ದಿನವಾಗಿ ಆಗಸ್ಟ್ 14ನೇ ದಿನಾಂಕವನ್ನು ಆಚರಿಸುವ ಸರಕಾರದ ನಿರ್ಧಾರವು ಸಾಮಾಜಿಕ ಸೌಹಾರ್ದತೆ, ಮಾನವ ಸಬಲೀಕರಣ ಹಾಗೂ ಏಕತೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.

8. ಒಂದು ದೇಶದ ಮಟ್ಟಿಗೆ 75 ವರ್ಷಗಳು ಕೇವಲ ಒಂದು ಕಣ್ಣುಮಿಟುಕಿಸಿದ ಹಾಗೆ ಹಾದುಹೋಗಿರಬಹುದಾದರೂ, ವ್ಯಕ್ತಿಗಳಿಗೆ ಅದೊಂದು ಜೀವಿತಾವಧಿಯಾಗಿದೆ ಎಂದರು. ಈ 75 ವರ್ಷಗಳಲ್ಲಿ ಬಾರತವು ಕಲಿತ ಪಾಠಗಳು, ಭಾರತವು ಮುಂದಿನ 25 ವರ್ಷಗಳ ಬಳಿಕ ಆಚರಿಸಲಿರುವ ಸ್ವಾತಂತ್ರ್ಯದ ಶತಮಾನೋತ್ಸದ ವೇಳೆಗೆ ಹೊಸ ಮೈಲುಗಲ್ಲಿನೆಡೆಗೆ ಧಾವಿಸಲು ನೆರವಾಗಲಿದೆ.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries