ಬದಿಯಡ್ಕ: 'ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ಹಾಗೂ ಆಧ್ಯಾಪಕರ ನಡುವಣ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರೀ ಶಾಲೆಯ ಪಿ.ಟಿ.ಎ ಅಧ್ಯಕ್ಷ ರಮೇಶ ಪದ್ಮಾರ್ ಅಭಿಪ್ರಾಯಪಟ್ಟರು.
ಅವರು ಶಾಲೆಯಲ್ಲಿ ನಡೆದ ಪ್ಲಸ್ ಟು ವಿದ್ಯಾರ್ಥಿಗಳ 'ಪ್ರತಿಭಾ ಪುರಸ್ಕಾರ- 22' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲೆಯ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಪ್ರತಿಭಾ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಳೆದ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಹಾಗೂ ತೊಂಬತ್ತು ಶೇಕಡಾಕ್ಕಿಂತ ಅಧಿಕ ಅಂಕ ಪಡೆದ ಮೂವತ್ತೆಂಟು ಮಂದಿ ವಿದ್ಯಾರ್ಥಿಗಳಿಗೆ ಶಾಲಾ ನೌಕರ ಸಂಘ ಹಾಗೂ ಪಿ.ಟಿ.ಎ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೇನಾನಿ ಹಾಗೂ ವಿದ್ಯಾಭಿಮಾನಿ ಬಾಲಚಂದ್ರ ಕೇಕುಣ್ಣಾಯ ಅವರು ಪ್ರತಿವರ್ಷ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ತಾವು ನೀಡುತ್ತಿರುವ ಬಹುಮಾನವನ್ನು ಹದಿನಾರುಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ ಪೆÇ್ರೀತ್ಸಾಹಿಸಿದರು. ಇದೇ ಸಂದರ್ಭದಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ
ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಪ್ಪಂಗಳ ಟ್ರಸ್ಟ್ ಜಯನಗರ ಹಾಗೂ ರಕ್ಷಾ ಆರ್ ಸಿ ಸಿ ನಾರಂಪಾಡಿ ಇಲ್ಲಿಯ ವಿಠ್ಠಲ ರಾಜ್ ಪ್ರತಿ ವರ್ಷ ನೀಡುತ್ತಿರುವ ನಗದು ಬಹುಮಾನವನ್ನು ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಾಂಶುಪಾಲ ಸತೀಶ ವೈ ಸ್ವಾಗತಿಸಿ, ಶಿಕ್ಷಕಿ ಲೇಖಾ ಪಿಕೆ ವಂದಿಸಿದರು. ಅಧ್ಯಾಪಕ ಗಣೇಶ ಕಾರ್ಯಕ್ರಮ ನಿರೂಪಿಸಿದರು.