ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿ ಗೋಪಿನಾಥ್ ರವೀಂದ್ರನ್ ಅವರು 'ಕ್ರಿಮಿನಲ್' ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಿಫ್, 'ರಾಜಕೀಯ ಕಾರಣಕ್ಕಾಗಿ ಗೋಪಿನಾಥ್ ಅವರು ಕುಲಪತಿ ಹುದ್ದೆಯಲ್ಲಿದ್ದಾರೆ.
ನನ್ನನ್ನು ವಿಶ್ವವಿದ್ಯಾಲಯಕ್ಕೆ ಅವರೇ ಆಹ್ವಾನಿಸಿದ್ದರು. ಅಲ್ಲಿ ನನ್ನ ಮೇಲೆ ಹಲ್ಲೆ ಯತ್ನ ನಡೆದಾಗ ಪೊಲೀಸರಿಗೆ ಮಾಹಿತಿ ನೀಡಬೇಕಾಗಿರುವುದು ಅವರ ಕರ್ತವ್ಯವಲ್ಲವೇ? ಆದರೆ ಅವರು ಹಾಗೆ ಮಾಡಲಿಲ್ಲ. ಈ ಸಂಚಿನಲ್ಲಿ ಅವರೂ ಭಾಗಿಯಾಗಿದ್ದಾರೆ' ಎಂದೂ ಆರೋಪಿಸಿದ್ದಾರೆ.
2019ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ತಮ್ಮ ವಿರುದ್ಧ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ವೇದಿಕೆಯಲ್ಲಿ ನಡೆದ ಘಟನೆಗಳ ಕುರಿತು ವರದಿ ನೀಡುವಂತೆ ಕುಲಪತಿ ಅವರಿಗೆ ರಾಜಭವನ ಸೂಚಿಸಿತ್ತು. ಆದರೆ ಅವರು ವರದಿ ನೀಡಿಲ್ಲ ಎಂದೂ ಆರಿಫ್ ಅವರು ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ಕುರಿತ ಆರಿಫ್ ಅವರ ನಿಲುವನ್ನು ಖಂಡಿಸಿ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆದಿತ್ತು.