ಜಮ್ಮು ಮತ್ತು ಕಾಶ್ಮೀರ: 'ಭಾರಿ ಮಳೆಯ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇವಾಲಯವು, ಶನಿವಾರ ಬೆಳಿಗ್ಗೆಯಿಂದ ಪುನರಾರಂಭಗೊಂಡಿದೆ' ಎಂದು ಅಧಿಕಾರಿಗಳು ತಿಳಿಸಿದರು.
'ಕಾತ್ರಾದ ಮೂಲ ಶಿಬಿರವಾದ ದಾರ್ಶನಿ ದೋಡಿಯಿಂದ, ಬೆಳಿಗ್ಗೆ 6.30ರ ಸುಮಾರಿಗೆ 1,500ಕ್ಕೂ ಹೆಚ್ಚು ಭಕ್ತರು ಹಳೆಯ ಮಾರ್ಗದಲ್ಲೇ ಯಾತ್ರೆಯ ಪ್ರಯಾಣದ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ' ಎಂದು ಅವರು ಹೇಳಿದರು.
'ಆದರೆ, ಯಾತ್ರೆಯ ಹೊಸ ಮಾರ್ಗ ಎಂದು ಕರೆಯಲ್ಪಡುವ ಹಿಮಕೋಟಿಯಲ್ಲಿ (ಬ್ಯಾಟರಿ ಕಾರ್) ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮಾರ್ಗವನ್ನು ಇನ್ನೂ ಮುಚ್ಚಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ' ಎಂದರು.
ಭಾರಿ ಮಳೆಯ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಧಾರಾಕಾರವಾಗಿ ಮಳೆ ಆರಂಭವಾಗಿ ಮಧ್ಯರಾತ್ರಿಯವರೆಗೂ ಸುರಿಯುವ ವೇಳೆ ಸಾವಿರಾರು ಭಕ್ತರು ದೇಗುಲದಲ್ಲಿ ಸೇರಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹಲವಾರು ವಿಡಿಯೊಗಳು ವೈಷ್ಣೋದೇವಿ ಮಾರ್ಗದಲ್ಲಿ ಉಂಟಾದ ಪ್ರವಾಹ ಸ್ಥಿತಿಯನ್ನು ತೋರಿಸುತ್ತಿದ್ದವು.
'ಮಳೆಯಿಂದಾಗಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ' ಎಂದು ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಶುಲ್ ಗರ್ಗ್ ಹೇಳಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ವಿಪತ್ತು ನಿರ್ವಹಣಾ ತಂಡಗಳು ಮತ್ತು ವೈದ್ಯಕೀಯ ಘಟಕಗಳಿಗೆ ಸೂಚನೆ ನೀಡಲಾಗಿದೆ.