ನ್ಯೂಯಾರ್ಕ್: ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ 24 ವರ್ಷಗಳ ನ್ಯೂ ಜೆರ್ಸಿ ವ್ಯಕ್ತಿಯ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಲಾಗಿದ್ದು, ಜಾಮೀನು ರಹಿತವಾಗಿ ಜೈಲಿಗೆ ಕಳಿಸಲಾಗಿದೆ.
ನ್ಯೂ ಯಾರ್ಕ್ ಸ್ಟೇಟ್ ಪೊಲೀಸರು ದಾಳಿಯ ತನಿಖೆಯನ್ನು ನಡೆಸುತ್ತಿದ್ದು, ಫೇರ್‌ವ್ಯೂನ ಹಾದಿ ಮಾತರ್ ಎಂಬುವವನನ್ನು ಬಂಧಿಸಲಾಗಿದೆ.
ಹಾದಿ ಮಾತರ್ ವಿರುದ್ಧ ದ್ವಿತೀಯ ದರ್ಜೆ ಹತ್ಯೆ ಯತ್ನ ಹಾಗೂ ಹಲ್ಲೆಯ ಪ್ರಕರಣ ದಾಖಲಾಗಿದ್ದು, ಚೌಟಕ್ವಾ ಕೌಂಟಿ ಜೈಲಿನಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 'ದಿ ಸೈಟಾನಿಕ್ ವರ್ಸಸ್' ಪುಸ್ತಕಕ್ಕೆ ಸಂಬಂಧಿಸಿದಂತೆ ಹಲವು ಬೆದರಿಕೆಗಳನ್ನು ಎದುರಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.