ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಮಂಗಳವಾರ ಗೌರವ ನಮನ ಸಲ್ಲಿಸಿದರು.
ವಾಜಪೇಯಿ ಸ್ಮಾರಕ 'ಸದೈವ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಕೇಂದ್ರ ಸಚಿವರು, ಪಕ್ಷದ ನಾಯಕರು ಭಾಗಿಯಾಗಿದ್ದರು.
ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ' ಅಟಲ್ ಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ 'ಸದೈವ್ ಅಟಲ್'ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದೆ. ದೇಶ ಸೇವೆ ವಿಚಾರದಲ್ಲಿ ಅಟಲ್ ಜಿ ನಮಗೆಲ್ಲಾ ಸ್ಫೂರ್ತಿ. ಅವರು ಭಾರತದ ಪರಿವರ್ತನೆಗೆ ಶ್ರಮಿಸಿದ ಪ್ರವರ್ತಕ' ಎಂದು ಹೇಳಿದ್ದಾರೆ.
ಭಾರತ ರತ್ನ ಪುರಸ್ಕೃತ ವಾಜಪೇಯಿ ಅವರು 1998-2004ರ ವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ 93ನೇ ವಯಸ್ಸಿನಲ್ಲಿ 2018ರಲ್ಲಿ ಇಹಲೋಕ ತ್ಯಜಿಸಿದರು.