ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಐದು ವರ್ಷ ಕೆಲಸ ನಿರ್ವಹಿಸಿದ ಎಂ.ವೆಂಕಯ್ಯ ನಾಯ್ಡು ಅವರಿಗೆ ನಿನ್ನೆ ಸದನದಲ್ಲಿ ಗೌರವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ನಾಯ್ಡು ಅವರ ಅಧಿಕಾರಾವಧಿ ಬುಧವಾರ ಅಂತ್ಯವಾಗಲಿದೆ.
ಮೊಹರಂ ಮತ್ತು ರಕ್ಷಾ ಬಂಧನದ ನಿಮಿತ್ತ ಮಂಗಳವಾರ ಮತ್ತು ಗುರುವಾರ ಸದನದ ಕಲಾಪಗಳಿಗೆ ರಜೆ ಇದೆ.
ಹೀಗಾಗಿ ನಿನ್ನೆ ಬೀಳ್ಕೊಡುಗೆ ನೀಡಲಾಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ವೆಂಕಯ್ಯ ನಾಯ್ಡು ಅವರ ಭಾಷೆಗಳ ಮೇಲೆ ಅವರ ಹಿಡಿತ ಬಹಳ ಉತ್ತಮವಾಗಿದೆ. ನಾನು ವೆಂಕಯ್ಯ ನಾಯ್ಡು ಅವರ ಜೊತೆ ಬಹಳ ಸಮಯ ಕೆಲಸ ಮಾಡಿದ್ದೇನೆ. ಅವರು ಮಾತನಾಡುತ್ತಿದ್ದರೆ ಎಲ್ಲರೂ ಮೌನವಾಗಿ ಕೇಳಿಸಿಕೊಳ್ಳುತ್ತಾರೆ. ಎಲ್ಲರನ್ನೂ ಹಿಡಿದಿಡುವ ಪ್ರಖರ ಮಾತುಗಳು, ಹಾಸ್ಯ, ಮೋಡಿ ಮಾಡುವ ಸಾಮರ್ಥ್ಯ ಅವರಿಗಿದೆ. ನಾಯ್ಡು ಅವರು ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣಾಭಾವದಿಂದ ನಿರ್ವಹಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟುಮಹಿಳೆಯರಿದ್ದಾರೆ. ಇವತ್ತು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಸಾಧನೆ ತೋರುತ್ತಿದ್ದಾರೆ. ಅವರಿಗೆ ಪುರುಷರಷ್ಟೇ ಗೌರವ, ಅವಕಾಶ ನೀಡಬೇಕು. ದೇಶದಲ್ಲಿ ಇನ್ನಷ್ಟುಮಹಿಳಾ ಸಬಲೀಕರಣ ಆಗಬೇಕಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದರು ಎಂದು ಪ್ರಧಾನಿ ಸ್ಮರಿಸಿಕೊಂಡರು.
ನಾಯ್ಡು ಅವರ ಉತ್ತರಾಧಿಕಾರಿ ಎನ್ಡಿಎಯ ಜಗದೀಪ್ ಧನಕರ್ ಅವರು ಆಗಸ್ಟ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧನಕರ್ ಭರ್ಜರಿ ಜಯ ಗಳಿಸಿದ್ದರು. ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರ ವಿರುದ್ಧ ಗೆಲುವು ಗಳಿಸಿದ್ದರು. ಒಟ್ಟು ಚಲಾವಣೆಯಾದ 725 ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರೆ, ಆಳ್ವಾ ಅವರು 182 ಮತಗಳನ್ನು ಪಡೆದಿದ್ದಾರೆ. 15 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿತ್ತು.
5 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರು, ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಮಾತುಗಳ ವಿಡಿಯೋ ಇಲ್ಲಿದೆ: