ನವದೆಹಲಿ : ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್‌ಎ) ಆರೋಪಿಗಳ ಬಂಧನ ಹಾಗೂ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರವನ್ನು ಎತ್ತಿಹಿಡಿದು ನೀಡಿದ್ದ ತೀರ್ಪು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
'ಸರಿ, ಇದರ ವಿಚಾರಣೆಗೆ ದಿನ ಗೊತ್ತುಪಡಿಸುತ್ತೇವೆ' ಎಂದು ಇದಕ್ಕೆ ಸಂಬಂಧಿಸಿದ ಅರ್ಜಿ ಪರಿಶೀಲನೆಗೆ ಬಂದಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಹೇಳಿತು.
ಆರ್ಥಿಕ ವ್ಯವಸ್ಥೆಯ ಸುಗಮ ಕಾರ್ಯಾಚರಣೆಗೆ ಹಣ ಅಕ್ರಮ ವರ್ಗಾವಣೆಯು ಧಕ್ಕೆ ತರಲಿದೆ ಎಂಬುದು ಸಾಮಾನ್ಯ ಅಭಿಪ್ರಾಯ ಎಂದು ಸುಪ್ರೀಂ ಕೋರ್ಟ್ ಜುಲೈ 27ರಂದು ಅಭಿಪ್ರಾಯಪಟ್ಟಿತ್ತು. 'ಇದು, ಸಾಮಾನ್ಯ ಅಪರಾಧವಲ್ಲ' ಎಂದೂ ಪ್ರತಿಪಾದಿಸಿತ್ತು.
'ಹಣ ಅಕ್ರಮ ವರ್ಗಾವಣೆಯು ಅಪರಾಧ. ಇದನ್ನು ಕೆಲ ನಿರ್ಲಜ್ಜ್ಯ ಉದ್ಯಮಿಗಳಷ್ಟೇ ಮಾಡುತ್ತಿಲ್ಲ; ಕೆಲ ಉಗ್ರ ಸಂಘಟನೆಗಳು ಮಾಡುತ್ತಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿವೆ' ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸಿತ್ತು.
2002ರ ಕಾಯ್ದೆಯ ಪ್ರಕಾರ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು 'ಪೊಲೀಸರಲ್ಲ; ಪ್ರಕರಣ ಸಂಬಂಧ ಇ.ಡಿ. ವರದಿಯನ್ನು ಅಪರಾಧ ದಂಡ ಸಂಹಿತೆಯಡಿ ದಾಖಲಿಸುವ ಎಫ್‌ಐಆರ್ ಜೊತೆಗೂ ಹೋಲಿಸಲಾಗದು ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠ ಹೇಳಿತ್ತು.