ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು(ಸಿಎಎ) ಶೀಘ್ರ ಜಾರಿ ಮಾಡುವಂತೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾ, ಕೋವಿಡ್ ಮುಂಜಾಗ್ರತಾ ಡೋಸ್ ಲಸಿಕೆ ವಿತರಣೆ ನಂತರ ಕಾನೂನು ಜಾರಿ ಮಾಡುವ ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುವೇಂದು ಅಧಿಕಾರಿ, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 45 ನಿಮಿಷಗಳ ಕಾಲ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಂಕ್ಷಿಪ್ತ ವಿವರ ನೀಡಿದೆ. ಹಾಗೆಯೇ ಶೀಘ್ರವೇ ಸಿಎಎ ಜಾರಿಗೆ ಮನವಿ ಮಾಡಿದೆ' ಎಂದು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ 2019ರ ಡಿಸೆಂಬರ್ ನಲ್ಲಿ ಸಂಸತ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಕಾಯ್ದೆಗೆ ಇನ್ನೂ ನಿಯಮಗಳನ್ನು ರೂಪಿಸಿಲ್ಲ.