ತಿರುವನಂತಪುರ: ಪಾಲಕ್ಕಾಡ್‌ನಲ್ಲಿ ಸಿಪಿಎಂ ಪಕ್ಷದ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.
ಮಲಂಪುಳ ಬಳಿಯ ಕುನ್ನಂಗಡ ನಿವಾಸಿ ಶಾಜಹಾನ್ (40) ಕೊಲೆಯಾದವರು. ಇವರು ಸಿಪಿಎಂ ಪಕ್ಷದ ವಿಭಾಗೀಯ ಕಾರ್ಯದರ್ಶಿಯಾಗಿದ್ದರು.
ಸ್ಥಳೀಯ ಸಮಿತಿಯ ಸದಸ್ಯರೂ ಆಗಿದ್ದರು.
'ದುಷ್ಕರ್ಮಿಗಳ ಗುಂಪೊಂದು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಕುನ್ನಂಗಡ ವೃತ್ತದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆಯಲ್ಲಿ ಶಾಜಹಾನ್ ಅವರ ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಈ ಕೊಲೆ ಮಾಡಿದ್ದಾಗಿ ಸಿಪಿಎಂ ಆರೋಪಿಸಿದೆ. ಪಕ್ಷದೊಳಗಿನ ಒಳಜಗಳವೇ ಕೊಲೆಗೆ ಕಾರಣವೆಂದು ಬಿಜೆಪಿ ದೂರಿದೆ.