ನವದೆಹಲಿ :ಕುಡಿಯುವ ನೀರಿನ ಪೂರೈಕೆ ಸ್ಥಳಗಳಲ್ಲಿ ನಲ್ಲಿಗಳನ್ನು ತಿರುಗಿಸಲು ಕಾಲುಗಳಿಂದ ಚಾಲಿತ ಪೆಡಲ್‌ಗಳು, ಆಧರಿಸಿಕೊಳ್ಳಲು ಕಂಬಿಗಳು ಮತ್ತು ನಲ್ಲಿಗಳ ಮೇಲೆ ಬ್ರೈಲ್ ಲಿಪಿಯಲ್ಲಿ ಸೂಚನೆಗಳು ಇವು ವಿಕಲಾಂಗರು, ವೃದ್ಧರು ಮತ್ತು ಇತರ ದುರ್ಬಲ ವರ್ಗಗಳಿಗೆ ನೀರು ಪೂರೈಕೆಗಾಗಿ ಪೈಪ್‌ಲೈನ್ ವ್ಯವಸ್ಥೆಯ ಕುರಿತು ಕೇಂದ್ರ ಸರಕಾರವು ರೂಪಿಸಿರುವ ಕರಡು ಮಾರ್ಗಸೂಚಿಗಳಲ್ಲಿ ಸೇರಿವೆ.
ಕುಡಿಯುವ
ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.ಮಾರ್ಗಸೂಚಿಗಳು
ಗುರಿಯಾಗಿಸಿಕೊಂಡಿರುವವರಲ್ಲಿ ಕುಡಿಯುವ ನೀರನ್ನು ಪಡೆದುಕೊಳ್ಳುವಾಗ ವಿಕಲಾಂಗರು ಮತ್ತು
ವೃದ್ಧರ ರೀತಿಯಲ್ಲಿಯೇ ಅಡೆತಡೆಗಳನ್ನು ಎದುರಿಸುವ ಗರ್ಭಿಣಿಯರು,ಪುಟ್ಟ ಮಕ್ಕಳನ್ನು
ಹೊಂದಿರುವ ತಾಯಂದಿರು,ಅಲ್ಪಾವಧಿಯ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರು ಸಹ
ಸೇರಿದ್ದಾರೆ.
ಕರಡು ದಾಖಲೆಯಲ್ಲಿ ವಿವಿಧ ಮಾರ್ಗಸೂಚಿಗಳಲ್ಲಿಯ ಹಾಲಿ
ನಿಬಂಧನೆಗಳನ್ನು ಹೋಲಿಸಲಾಗಿದೆ ಮತ್ತು ಸಾರ್ವಜನಿಕ ಕಚೇರಿಗಳು ಮತ್ತು ಸ್ಥಳಗಳು
ಸೇರಿದಂತೆ ಮನೆಗಳು,ಸಮುದಾಯ ಮತ್ತು ಸಾಂಸ್ಥಿಕ ಮಟ್ಟಗಳಲ್ಲಿ ಕೊಳವೆಯ ಮೂಲಕ ಕುಡಿಯುವ
ನೀರಿನ ಪೂರೈಕೆಗಾಗಿ ಇಂತಹ ಎಲ್ಲ ದುರ್ಬಲರನ್ನು ಒಳಗೊಳ್ಳುವ ವಿನ್ಯಾಸಕ್ಕಾಗಿ
ಸೂಚಿಸಲಾಗಿದೆ.
ಅಂಗನವಾಡಿ ಕೇಂದ್ರಗಳು,ಪ್ರಾಥಮಿಕ,ಪ್ರೌಢ ಮತ್ತು ಸನಿವಾಸ ಶಾಲೆಗಳು,ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳು,ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು,ಸಿವಿಲ್ ಮತ್ತು ಜಿಲ್ಲಾ ಆಸ್ಪತ್ರೆಗಳು,ಪಂಚಾಯತ ಕಚೇರಿಗಳು ಮತ್ತು ಮಾರುಕಟ್ಟೆ ಸ್ಥಳಗಳು ಈ ಮಾರ್ಗಸೂಚಿಗಳ ವ್ಯಾಪ್ತಿಗೊಳಪಡುತ್ತವೆ.
ವಿಕಲಾಂಗರಿಗಾಗಿ ಮತ್ತು ಮಕ್ಕಳಿಗಾಗಿ ನಲ್ಲಿ ವ್ಯವಸ್ಥೆಯ ಎತ್ತರ ಮತ್ತು ವಿನ್ಯಾಸವನ್ನು ಹೊಂದಿಸುವಂತೆಯೂ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಮಾನವ ಹಕ್ಕು ಗುಂಪುಗಳು ಮಾರ್ಗಸೂಚಿಗಳನ್ನು ಸ್ವಾಗತಿಸಿವೆಯಾದರೂ ದುರ್ಬಲ ಗುಂಪುಗಳಿಗೆ ನೆರವಾಗಲು ಅವುಗಳನ್ನು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಿಸುವಂತೆ ಸೂಚಿಸಿವೆ.
ಭಾರತದಲ್ಲಿ 10 ಕೋ.ಗೂ ಅಧಿಕ
ವಿಕಲಾಂಗರಿದ್ದಾರೆ (ವಿಶ್ವದಲ್ಲಿಯೇ ಅತಿ ಹೆಚ್ಚು) ಮತ್ತು ಕೊಳವೆ ನೀರಿನ ಸೌಲಭ್ಯವನ್ನು
ಪಡೆದುಕೊಳ್ಳುವಲ್ಲಿ ದೈಹಿಕ ಅಡೆತಡೆಗಳು ಸಂವಿಧಾನದ 121ನೇ ವಿಧಿಯಡಿ ಖಾತರಿಪಡಿಸಲಾಗಿರುವ
ಅವರ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಪ್ರಮೋಷನ್
ಆಫ್ ಎಂಪ್ಲಾಯಮೆಂಟ್ ಫಾರ್ ಡಿಸೇಬಲ್ಡ್ ಪೀಪಲ್ ನ ಕಾರ್ಯಕಾರಿ ನಿರ್ದೇಶಕ ಅರ್ಮಾನ್ ಅಲಿ
ಹೇಳಿದರು.
ಮಾರ್ಗಸೂಚಿಗಳು ಕಾಗದದಲ್ಲಿ ಉತ್ತಮವಾಗಿರುವಂತೆ ಕಂಡು
ಬರುತ್ತಿವೆ,ಆದರೆ ಅವು ಭಾರತೀಯ ವಾಸ್ತವಗಳನ್ನು ಒಳಗೊಂಡಿರುವ ಅಗತ್ಯವಿದೆ ಎಂದು ಏಜ್ವೆಲ್
ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಿಮಾಂಶು ರಾಹಾ ಹೇಳಿದರು.