ನವದೆಹಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ದೇಶದ ಹಿತಾಸಕ್ತಿಯ ದೃಷ್ಟಿಕೋನದಿಂದ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.
ಅದು ಕೇವಲ ವೈಯಕ್ತಿಕ ಹಿತಾಸಕ್ತಿಯ ಮನಸ್ಥಿತಿಯಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದ್ದಾರೆ.
ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಶೆರ್ಗಿಲ್ ಈ ಕುರಿತು ಉಲ್ಲೇಖಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ನಿರ್ಣಯ ತೆಗೆದುಕೊಳ್ಳುವವರ ಸಿದ್ಧಾಂತ ಹಾಗೂ ದೂರದೃಷ್ಟಿಯು ಪಕ್ಷದ ಯುವ ಕಾರ್ಯಕರ್ತರು ಹಾಗೂ ಆಧುನಿಕ ಭಾರತದ ಆಕಾಂಕ್ಷೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ದೇಶದ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ತುಂಬಾನೇ ನೋವನ್ನುಂಟು ಮಾಡಿದೆ. ಇದರ ಬದಲು ವೈಯಕ್ತಿಕ ಹಿತಾಸಕ್ತಿಯ ಮನಸ್ಥಿತಿಯಿಂದ ಪ್ರಭಾವಿತವಾಗಿದೆ. ತಳಹಂತಹ ವಾಸ್ತವವನ್ನು ನಿರಂತರವಾಗಿ ನಿರ್ಲಕ್ಷ್ಯಮಾಡಲಾಗುತ್ತಿದೆ. ಇದನ್ನು ನಾನು ನೈತಿಕವಾಗಿ ಒಪ್ಪಿಕೊಳ್ಳಲು ಮತ್ತು ಪಕ್ಷದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.